Yakshagana.pngಯಕ್ಷಗಾನ ಎಂಬುದು ನೃತ್ಯ, ಹಾಡುಗಾರಿಕೆ, ವೇಷಭೂಷಣಗಳಲ್ಲಿ ಒಂದು ವಿಭಿನ್ನ ಕಲೆಯಾಗಿದೆ. ಇದು ಕರ್ನಾಟಕದ ಸಾಂಪ್ರದಾಯಿಕ ಕಲೆಗಳಲ್ಲಿ ಅತ್ಯಂತ ಮಹತ್ವದ ಪ್ರಕಾರವಾಗಿದೆ. ಉತ್ತರಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕಾಸರಗೋಡು ಈ ಭಾಗಗಳಲ್ಲಿ ಹೆಸರುವಾಸಿಯಾದ ಕಲಾ ಪ್ರಕಾರವಾಗಿದೆ.
ಯಕ್ಷಗಾನದಲ್ಲಿ ಹಲವಾರು ಪ್ರಮುಖ ಅಂಶಗಳಿವೆ ಜೊತೆಗೆ ಭಿನ್ನ ಪ್ರಕಾರಗಳು ಕೂಡ ಇವೆ. ಐತಿಹಾಸಿಕ ಪ್ರಸಂಗಗಳು, ಸಾಮಾಜಿಕ ಪ್ರಸಂಗಗಳು ಹಾಗೂ ಇತ್ತೀಚಿನ ಆದುನಿಕ ಪ್ರಸಂಗಗಳನ್ನೂ ಕೂಡ ನಾವು ಯಕ್ಷಗಾನದಲ್ಲಿ ಕಾಣಬಹುದು. ಹಾಡು, ನೃತ್ಯ ಮತ್ತು ಸಂಭಾಷಣೆಗೆ ಪ್ರಾಮುಖ್ಯತೆಯಿರುವ ಈ ಕಲೆಯಲ್ಲಿ ಅಭಿನಯವೂ ಕೂಡ ಅಷ್ಟೆ ಪ್ರಮುಖ ಪಾತ್ರವನ್ನು ಪಡೆದಿದೆ.
ಯಕ್ಷಗಾನದಲ್ಲಿ ಯಾವುದಾದರೂ ಒಂದು ಕಥೆಯನ್ನು ಹಾಡಿನ ಮೂಲಕ ಪ್ರಸ್ತುತಪಡಿಸಲಾಗುತ್ತದೆ. ಅದಕ್ಕೆ ತಕ್ಕಂತೆ ನೃತ್ಯ ಮತ್ತು ಸಂಭಾಷಣೆಯನ್ನು ಪಾತ್ರಧಾರಿಯಾದವನು ವೀಕ್ಷಕರಿಗೆ ಅರ್ಥವಾಗುವಂತೆ ಪ್ರಸ್ತುತಪಡಿಸಬೇಕಾಗುತ್ತದೆ. ಪದ್ಯವನ್ನು ಹಾಡುವವರಿಗೆ ಭಾಗವತ ಎಂದು ಕರೆಯುತ್ತಾರೆ. ಈತನೇ ಇಡೀ ಕಥೆಯನ್ನು ಎಲ್ಲಿಯೂ ದಾರಿ ತಪ್ಪದಂತೆ ಬುಡದಿಂದ ಕೊನೆಯವರೆಗೂ ಕೊಂಡೊಯ್ಯುತ್ತಾನೆ. ರಾಗ ಮತ್ತು ನಿರರ್ಗಳವಾಗಿ ಹಾಡುವ ಕಲೆ ಭಾಗವತನಾದವನಿಗೆ ಅತಿ ಮುಖ್ಯವಾಗಿರುತ್ತದೆ.
ಇನ್ನು ಬಣ್ಣ ಬಣ್ಣದ ವೇಷಭೂಷಣಗಳನ್ನು ಧರಿಸಿಕೊಂಡು, ನೃತ್ಯವನ್ನು ಮಾಡುತ್ತಾ ಜನರನ್ನು ರಂಜಿಸುವವರಿಗೆ ಪಾತ್ರಧಾರಿಗಳು ಎಂದು ಕರೆಯುತ್ತಾರೆ. ಸಂದರ್ಭ ಮತ್ತು ಪಾತ್ರಕ್ಕೆ ತಕ್ಕಂತೆ ಸ್ವರ ಏರಿಳಿತದಿಂದ ಮಾತನಾಡುತ್ತಾ, ಆ ಪಾತ್ರಕ್ಕೆ ಜೀವತುಂಬುವ ಕಲೆ ಪಾತ್ರಧಾರಿಯಾದವನಿಗೆ ಅವಶ್ಯವಾಗಿ ತಿಳಿದಿರಬೇಕಾಗಿರುತ್ತದೆ. ಕೆಲವು ಪಾತ್ರಗಳು ವೀಕ್ಷಿಕರ ಮನಸ್ಸಿನಲ್ಲಿ ಅದೆಷ್ಟರ ಮಟ್ಟಿಗೆ ಸಂಚಲನವನ್ನುಂಟು ಮಾಡುತ್ತದೆ ಎಂದರೆ ಸಾಮಾನ್ಯವಾಗಿ ರಾವಣನನ್ನು ದುಷ್ಟ ಎಂದು ಭಾವಿಸಿದವರು ಕೂಡ ಪಾತ್ರಧಾರಿಯ ಅಭಿನಯಕ್ಕೆ ಮನಸೋತು ಆತನ ಪಾತ್ರವನ್ನು ಪ್ರೀತಿಸಲು ಪ್ರಾರಂಭಿಸುವಂತಾಗುತ್ತದೆ.
ಇನ್ನುಳಿದಂತೆ ಯಕ್ಷಗಾನದಲ್ಲಿ ಮದ್ದಲೆ, ಚಂಡೆ, ತಾಳ, ಜಾಗಟೆ ಮುಂತಾದ ಸಂಗೀತ ಸಾಮಾಗ್ರಿಗಳನ್ನು ಬಳಸಲಾಗುತ್ತದೆ. ಭಾಗವತರ ರಾಗಕ್ಕೆ ತಕ್ಕಂತೆ ಈ ಹಿಮ್ಮೇಳಗಳು ಹೊಮ್ಮುವ ಮೂಲಕ, ವಿಚಾರಗಳನ್ನು ಮನ ಮುಟ್ಟಿಸುವುದರ ಜೊತೆಗೆ ವಿಷಯಕ್ಕೆ ಜೀವ ತುಂಬುವ ಪ್ರಯತ್ನವನ್ನು ಮಾಡುತ್ತವೆ. ಹಾಡಿನ ಜೊತೆಗೆ ಈ ಹಿಮ್ಮೇಳದ ಶಬ್ದಗಳು ಕೇಳುವ ಕಿವಿಗೆ ಮುದವನ್ನು ನೀಡುವ ಜೊತೆಗೆ ಪ್ರೇಕ್ಷಕರು ಸದಾ ಎಚ್ಚರಗೊಂಡಿರುವಂತೆ ಪ್ರೇರೇಪಿಸುತ್ತದೆ.
ಯಕ್ಷಗಾನವೆಂಬ ಕಲಾ ಪ್ರಕಾರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸುಮಾರು 500 ವರ್ಷಗಳ ಹಿಂದೆ ಈ ಕಲೆ ಒಂದು ಯೋಜಿತ ರೂಪವನ್ನು ಪಡೆದುಕೊಂಡಿತು ಎಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಕಲೆ ಸೂಕ್ತ ಪ್ರೋತ್ಸಾಹವಿಲ್ಲದೆ ಸ್ವಲ್ಪ ಮಟ್ಟಿಗೆ ಸೊರಗಿ ಹೋಗಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಕೋಟಾ ಶಿವರಾಮ ಕಾರಂತರು ಯಕ್ಷಗಾನವನ್ನು ಕುರಿತು ‘ಯಕ್ಷಗಾನ ಬಯಲಾಟ’ ಎಂಬ ಕೃತಿಯನ್ನು ರಚಿಸಿದ್ದಾರೆ, ಅದರಲ್ಲಿ ಈ ಕಲಾ ಪ್ರಕಾರದ ಬಗ್ಗೆ ಸಮುದ್ರದಷ್ಟು ಮಾಹಿತಿ ಲಭ್ಯವಿದೆ.
ಇತ್ತೀಚಿನ ವರ್ಷಗಳಲ್ಲಿ ಯಕ್ಷಗಾನದ ಮೂಲಕ ಖ್ಯಾತಿ ಗಳಿಸಿದ ಹಲವಾರು ಕಲಾವಿದರಿದ್ದಾರೆ. ಅವರುಗಳಲ್ಲಿ ಪ್ರಮುಖರಾದವರೆಂದರೆ-
ಕೆರೆಮನೆ ಮಹಾಬಲ ಹೆಗಡೆ, ವಾಸುದೇವ ಸಾಮಗ, ಕೆರೆಮನೆ ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಬಳ್ಕೂರು ಕೃಷ್ಣಯಾಜಿ, ಸುಬ್ರಮಣ್ಯ ಹೆಗಡೆ ಚಿಟ್ಟಾಣಿ, ಮಂಕಿ ಈಶ್ವರ ನಾಯ್ಕ್, ತೀರ್ಥಹಳ್ಳಿ ಗೋಪಾಲಾಚಾರಿ, ಖ್ಯಾತ ಭಾಗವತರೆಂದರೆ ಸುಬ್ರಮಣ್ಯ ಧಾರೇಶ್ವರ, ಕೊಳಗಿ ಕೇಶವ ಹೆಗಡೆ, ಹೆರಂಜಾಲು ಗೋಪಾಲ ಗಾಣಿಗ, ಕಾಳಿಂಗ ನಾವುಡ, ರಾಘವೇಂದ್ರ ಮಯ್ಯ ಮುಂತಾದವರು.
ಈ ರೀತಿಯ ಹಲವಾರು ಕಲಾವಿದರÀ ಗುಂಪಿಗೆ ಯಕ್ಷಗಾನ ಮೇಳ ಎಂದು ಕರೆಯುತ್ತಾರೆ. ಈ ಮೇಳಗಳು ಕಲಾವಿದರನ್ನು ಒಗ್ಗೂಡಿಸಿ, ಒಂದು ಸಂಘಟಿತ ಗುಂಪಿನ ಮೂಲಕ ಕಾರ್ಯಕ್ರಮವನ್ನು ನಡೆಸಿಕೊಡುತ್ತವೆ. ಇವುಗಳಲ್ಲಿ ಹಲವಾರು ಪ್ರಮುಖ ಮೇಳಗಳಿದ್ದು, ಸಾಕಷ್ಟು ಗುಣಮಟ್ಟದ ಕಲಾವಿದರಿಗೆ ಹೆಸರುವಾಸಿಯಾಗಿವೆ.
ಒಟ್ಟಿನಲ್ಲಿ ನೂರಾರು ವರ್ಷಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ಕಲಾ ಪ್ರಕಾರವೊಂದು ಇಂದು ಅಗತ್ಯ ಪ್ರೋತ್ಸಾಹವಿಲ್ಲದೆ ಕುಗ್ಗಿಹೋಗಿದೆ. ಹಾಗಾಗಿ ಇಂತಹಾ ಒಂದು ಐತಿಹಾಸಿಕ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡಿಗರು ಒಂದಾಗಬೇಕಾದ ಅನಿವಾರ್ಯತೆಯಿದೆ.
ಅಭಿಮಾನಿಗಳೇ ಕಲಾವಿದನ ನಿಜವಾದ ಆಸ್ತಿ ಎಂಬುದು ಸಾರ್ವಕಾಲಿಕ ಸತ್ಯ.
Advertisements