unnamed

ಆಂಗ್ಲರ ವಿರುದ್ಧ ನಡೆಯುತ್ತಿರುವ ಅಂತಿಮ ಮತ್ತು ಐದನೇ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗರು ಸದ್ದು ಮಾಡುತ್ತಿದ್ದಾರೆ. ಪಂದ್ಯ ಆರಂಭಿಸಿದ ಕನ್ನಡಿಗ ಕೆ.ಎಲ್. ರಾಹುಲ್ ದ್ವಿಶತಕದ ಅಂಚಿನಲ್ಲಿ ಎಡವಿದರೆ, ಮತ್ತೊಬ್ಬ ಕನ್ನಡಿಗ ಕರುಣ್ ನಾಯರ್ ತ್ರಿಶತಕ ಸಾಧನೆ ಮಾಡಿ ನಾಡಿನ ಕೀರ್ತಿಯನ್ನು ಪಸರಿಸಿದ್ದಾರೆ.

ಈ ಮೂಲಕ ಟೀಮ್ ಇಂಡಿಯಾದಲ್ಲಿ ಕನ್ನಡಿಗರು 18 ವರ್ಷದ ಬಳಿಕ ಮತ್ತೆ ಜೊತೆಯಾಟವಾಗಿದ್ದಾರೆ. ಮತ್ತೆ ತಮ್ಮ ಶಕ್ತಿ ಸಾಮಾರ್ಥ್ಯವನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ.

ಚೆನ್ನೈನ ಚಿಪಾಕ್ ನಲ್ಲಿರುವ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ರಾಹುಲ್ ಮತ್ತು ಕರುಣ್ ನಾಯರ್ ಜೊತೆಯಾಗಿ ಮಿಂಚು ಹರಿಸಿದ್ದು, ಈ ಇಬ್ಬರು ಆಟಗಾರರೇ ಒಟ್ಟಾಗಿ 500ಕ್ಕೂ ಹೆಚ್ಚು ರನ್ ಬಾರಿಸಿದ್ದಾರೆ. ಇಂಗ್ಲೆಂಡ್ ಬೌಲರ್ ಗಳನ್ನು ಬಹುವಾಗಿ ಕಾಡಿದ್ದಾರೆ. ಚೆಂಡನ್ನು ಮೈದಾನದ ಮೂಲೆ ಮೂಲೆಗೂ ಅಟ್ಟಿದ್ದಾರೆ.

ಕರುಣ್ ನಾಯರ್ ತಮ್ಮ ಮೂರನೇ ಟಸ್ಟ್ ಪಂದ್ಯದಲ್ಲೇ ಚೊಚ್ಚಲ ತ್ರಿಶತಕ ಸಾಧನೆ ಮಾಡಿದ್ದು, ಕನ್ನಡಿಗರ ಮಟ್ಟಿಗೆ ಇದು ಮೊದಲನೇಯ ತ್ರಿಶತಕವಾಗಿದೆ. ನಾಯರ್ ಒಟ್ಟು 381 ಎಸೆತಗಳಲ್ಲಿ 303 ರನ್ ಸಿಡಿಸುವ ಮೂಲಕ ಈ ಸಾಧನೆ ಗೈದಿದ್ದಾರೆ.

ಟೀಮ್ ಇಂಡಿಯಾದ ಗೋಡೆ ಖ್ಯಾತಿಯ ಕನ್ನಡಿಗ ರಾಹುಲ್ ದ್ರಾವಿಡ್ 2004ರಲ್ಲಿ ಪಾಕಿಸ್ತಾನ ವಿರುದ್ಧ ಗಳಿಸಿದ್ದ 270 ರನ್ ಗಳು ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು.

ಇನ್ನು ಕರ್ನಾಟಕದ ಹುಡುಗ ಕೆ.ಎಲ್. ರಾಹುಲ್ ಒಂದೇ ಒಂದು ರನ್‌ ಅಂತರದಿಂದ ತಮ್ಮ ಟೆಸ್ಟ್ ಜೀವನದ ಮೊದಲ ದ್ವಿಶತಕ ದಾಖಲಿಸುವ ಅವಕಾಶದಿಂದ ವಂಚಿತರಾದರು, ಆದರೆ ಆ ನೋವನ್ನು ಕರುಣ್ ಮರೆಸಿದರು.

ರಾಹುಲ್ಕರುಣ್ ದಾಖಲೆಯ ಜೊತೆಯಾಟ

ಈ ಜೋಡಿಯ  ಜೊತೆಯಾಟವು  ದಾಖಲೆಯೊಂದಕ್ಕೆ ಕಾರಣವಾಯಿತು. 18 ವರ್ಷಗಳ ನಂತರ ಕರ್ನಾಟಕದ ಬ್ಯಾಟ್ಸ್‌ಮನ್‌ಗಳ ಜೋಡಿಯು ಭಾರತ ತಂಡಕ್ಕಾಗಿ ಟೆಸ್ಟ್‌ನಲ್ಲಿ  ಒಟ್ಟಾಗಿ ಬ್ಯಾಟ್ ಬೀಸಿದ್ದು ವಿಶೇಷವಾಗಿತ್ತು.

1999ರಲ್ಲಿ  ನ್ಯೂಜಿಲೆಂಡ್ ಎದುರು ಕಾನ್ಪುರದಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ರಾಹುಲ್ ದ್ರಾವಿಡ್ ಮತ್ತು ವಿಜಯ್ ಭಾರದ್ವಾಜ್ ಅವರು ಜೊತೆಯಾಟವಾಡಿದ್ದರು. ಇದಾದ ಬಳಿಕ ಕನ್ನಡಿಗರಿಬ್ಬರು ಜೊತೆಯಾಗಿ ಇನ್ನಿಂಗ್ಸ್ ಆಡಲು 18 ವರ್ಷ ಕಾಯಬೇಕಿತ್ತು.

ಇಂಗ್ಲೆಂಡ್ ವಿರುದ್ಧ ಬ್ಯಾಟಿಂಗ್ ಆರಂಭಿಸಿದ್ದ ರಾಹುಲ್ ಮತ್ತು ಪಾರ್ಥಿವ್ ಜೋಡಿಯು 152 ರನ್ ಕಲೆ ಹಾಕಿತು. ಪಾರ್ಥಿವ್ ನಂತರ ಚೇತೇಶ್ವರ ಪೂಜಾರ್ ಮತ್ತು ವಿರಾಟ್ ಕೊಹ್ಲಿ ಹೆಚ್ಚು ಹೊತ್ತು ಕ್ರಿಸ್ ಕಾಯ್ದುಕೊಳ್ಳಲಿಲ್ಲ.

ಈ ಸಂದರ್ಭದಲ್ಲಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ರಾಹುಲ್ ಅವರೊಂದಿಗೆ ಕರ್ನಾಟಕದ ಇನ್ನೊಬ್ಬ ಆಟಗಾರ ಕರುಣ್ ನಾಯರ್  ಜೊತೆಯಾದರು. ಇಬ್ಬರು ಸ್ನೇಹಿತರು ರನ್ ಹೊಳೆ ಹರಿಸಿದರು.

ಚೊಚ್ಚಲ ತ್ರಿಶತಕ ದಾಖಲಿಸಿದ ಕರುಣ್ ನಾಯರ್ , ಟೆಸ್ಟ್ ಪಂದ್ಯವೊಂದರಲ್ಲಿ ತ್ರಿಶತಕ ದಾಖಲಿಸಿದ ಎರಡನೇ ಆಟಗಾರ ಎಂಬ ಕ್ರೀರ್ತಿಗೆ ಪಾತ್ರರಾದರು. ಈ ಹಿಂದೆ ಸ್ಪೋಟಕ ಬ್ಯಾಟ್ಸ್ಮನ್ ವಿರೇಂದ್ರ ಸೆಹ್ವಾಗ್ ಎರಡು ಬಾರಿ ಟೀಮ್ ಇಂಡಿಯಾ ಪರ ತ್ರಿಶತಕವನ್ನು ದಾಖಲಿಸಿದ್ದರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕವನ್ನೇ ತ್ರಿಶತಕವಾಗಿ ಪರಿವರ್ತಿಸಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್‌ ಎನ್ನುವ ದಾಖಲೆ ಸಹ ಕರುಣ್‌ ಹೆಸರಲ್ಲಿ ದಾಖಲಾಯಿತು.

ಪ್ರಾಣಾಪಾಯದಿಂದ ಪಾರಾಗಿದ್ದ ಕರುಣ್:

ಇದೇ ವರ್ಷದ ಜುಲೈನಲ್ಲಿ ತಿರುವಾಂಕೂರ್‌ನ ಪತ್ತನ್‌ತ್ತಿಟ್ಟ್‌ ಎನ್ನುವ ಪ್ರದೇಶದ ಬಳಿ ಇರುವ ಪಾರ್ಥಸಾರಥಿ ದೇವಾಲಯದಲ್ಲಿ ನಡೆದ ಉತ್ಸವದಲ್ಲಿ ಪಾಲ್ಗೊಳ್ಳಲು ಕರುಣ್‌ ಕೇರಳಕ್ಕೆ ತೆರಳಿದ್ದರು.

ಈ ಸಂದರ್ಭದಲ್ಲಿ ಪಂಪಾನದಿಯ ಮೂಲಕ ಬರುವಾಗ  ದೋಣಿ ಮಗುಚಿ  ಬಿದ್ದಿತ್ತು. ಆಗ ಕರುಣ್‌ ಪ್ರಾಣಾಪಾಯದಿಂದ ಪಾರಾಗಿದ್ದರು.

‘ಹೇಗೆ ಈಜಬೇಕು ಎಂಬುದು ಗೊತ್ತಿರಲಿಲ್ಲ. ಅದೃಷ್ಟವಶಾತ್ ಅಲ್ಲಿದ್ದ ಸ್ಥಳಿಯರು ನನ್ನ ಕಾಪಾಡಿದರು’ ಎಂದು ಕರುಣ್‌ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು.

ಒಟ್ಟಿನಲ್ಲಿ ಕನ್ನಡಿಗರು ನಮ್ಮ ಹೆಮ್ಮೆಯ ಸಂಕೇತ.

Advertisements