kannada
ರಾಜ್ಯ ರಾಜಧಾನಿ ಬೆಂಗಳೂರಿನ ಖ್ಯಾತಿ ದೇಶ-ವಿದೇಶದಲ್ಲಿ ಪ್ರತಿಧ್ವನಿಸುತ್ತಿದ್ದರೆ, ಇತ್ತ ನಗರದಲ್ಲಿ ಕನ್ನಡಿಗನನ್ನು, ಕನ್ನಡವನ್ನು ಹೆಕ್ಕಿ ಹುಡುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನಾಡು ನುಡಿಯ ಸೊಗಡು ದಿನೇ ದಿನೇ ಮಾಯವಾದಂತೆ ಭಾಸವಾಗುತ್ತಿದೆ.
.
ಕನ್ನಡಿಗನೇ ತನ್ನ ನೆಲದಲ್ಲಿ ತನ್ನ ಅಸ್ತಿತ್ವಕ್ಕೆ ಹೋರಾಟ ನಡೆಸುವ ದುಸ್ಥಿತಿ ಎದುರಾಗಿದೆ. ನಮ್ಮದೇ ರಾಜ್ಯದಲ್ಲಿ ನಮ್ಮದೇ ಆಡು ಭಾಷೆಯನ್ನು ಆಡುವವರ ಸಂಖ್ಯೆ ದಿನೇ ದಿನೇ ಕುಸಿಯುತ್ತಿರುವುನ್ನು ನೋಡಿದರೆ ಮುಂದಿನ ಜನಾಂಗಕ್ಕೆ ನಾಡು-ನುಡಿಯ ಕಂಪನ್ನು ಪಸರಿಸುವುದಾದರು ಯಾರು..? ಮತ್ತೆ ಹೇಗೆ..? ಎನ್ನುವ ಪ್ರಶ್ನೆ ಉದ್ಭವವಾಗುತ್ತಿದೆ.
.
ಶಾಸ್ತ್ರೀಯ ಸ್ಥಾನಮಾನ ಪಡೆದಿರುವ ಕನ್ನಡ ಭಾಷೆಗೆ ತನ್ನದೇ ಆದ ಸುಂದರ ಇತಿಹಾಸವಿದೆ.ಸಂಸ್ಕೃತ,
ತಮಿಳಿನ ನಂತರದ ಅತ್ಯಂತ ಪುರಾತನ ಭಾಷೆ ಎಂಬ ಹೆಗ್ಗಳಿಕೆ ಸಹ ಇದೆ. ಅಲ್ಲದೇ ಹಲವು ಭಾಷೆಗಳ ಜನ್ಮಕ್ಕೂ ನಮ್ಮ ಭಾಷೆ ಕಾರಣವಾಗಿದೆ. ಆದರೆ ಇಂತಹ ಪ್ರಾಚೀನ ಭಾಷೆ ತನ್ನ ನೆಲದಲ್ಲೇ ಉಳಿವಿಗಾಗಿ ಪರದಾಡುತ್ತಿದೆ.
.
ದೇಶದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಕರ್ನಾಟಕದ ಹೆಮ್ಮೆಯ ಬೆಂಗಳೂರಿನಲ್ಲಿ ಕನ್ನಡಿಗನೇ ಪರಕೀಯನಾಗಿದ್ದಾನೆ, ಕನ್ನಡವೇ ಪರಕೀಯ ಭಾಷೆ ಎನ್ನುವಂತೆ ಬಿಂಬಿಸಲಾಗುತ್ತಿದೆ. ವಲಸಿಗರ ಸಂಖ್ಯೆ ಹೆಚ್ಚಾದಂತೆ ಬೇರೆ-ಬೇರೆ ಭಾಷೆಗಳ ಪ್ರಭಾವ ಹೆಚ್ಚಾಗಿ, ಕನ್ನಡಿಗನ ಕೂಗು ಯಾರಿಗೂ ಕೇಳದಾಗಿದೆ.
.
ಒಂದು ಕಡೆ ಹತ್ತಿರದಲ್ಲೇ ಇರುವ ತಮಿಳುನಾಡಿನಿಂದ ಬಂದ ತಮಿಳು ಭಾಷಿಕರ ಸಂಖ್ಯೆಯು ಹೆಚ್ಚಾಗಿದ್ದು, ಇದರೊಂದಿಗೆ ಆಂಧ್ರ ಭಾಗದ ತೆಲುಗು ಭಾಷಿಕರು ಸಹ ಅಧಿಕ ಪ್ರಮಾಣದಲ್ಲೇ ಇಲ್ಲಿ ನೆಲೆಯೂರಿದ್ದಾರೆ. ಅಲ್ಲಿಂದ ಬಂದು ಇಲ್ಲಿನ ಭಾಷೆಯನ್ನು ಕಲಿಯುವ ಬದಲು ತಮ್ಮ ಭಾಷೆಯನ್ನೇ ಪ್ರೋತ್ಸಾಹಿಸುವ ಮಟ್ಟಕ್ಕೆ ಬೆಳೆದಿದ್ದಾರೆ.
.
ಇದರ ಬೆನ್ನ ಹಿಂದೆಯೇ ಐಟಿ-ಬಿಟಿ ಮಂದಿ ಸಹ ಹಿಂದಿ-ಇಂಗ್ಲೀಷ್ ಭಾಷೆಯ ಬಳಕೆಯನ್ನು ಹೆಚ್ಚು ಮಾಡಿ ಸ್ಥಳೀಯ ಭಾಷೆಯ ಅವಲಂಬನೆಯನ್ನು ಕಡಿಮೆ ಮಾಡುವ ಕಾರ್ಯಕ್ಕೆ ಕಿಚ್ಚು ಹೆಚ್ಚಿಸಿದ್ದಾರೆ.
.
ಇದನ್ನೇಲ್ಲ ನೋಡಿಕೊಂಡೆ ಸುಮ್ಮನಿರುವ ಪ್ರಜ್ಞಾವಂತ ಕನ್ನಡಿಗರು ನಮ್ಮ ನಾಡು-ನುಡಿಯ ಉಳಿವಿಗೆ ತಮ್ಮದೇ ಆದ ಅಳಿಲಿನ ಸೇವೆ ಮಾಡಲೇಬೇಕಿದೆ. ಭಾಷೆ ಉಳಿವಿಗೆ ಸಂಘಟನೆಯೇ ಬೇಕು, ಹೋರಾಟವೇ ನಡೆಯಬೇಕು ಎಂಬ ನಿಯಮವಿಲ್ಲ, ನಮ್ಮ ದಿನ ನಿತ್ಯದ ಚಟುವಟಿಕೆಗಳೇ ನಮ್ಮ ಸೊಗಡನ್ನು ಉಳಿಸಿ-ಬೆಳೆಸಲಿದೆ.
.
ಕನ್ನಡಿಗರು ಮಾಡಬೇಕಾಗಿದ್ದೇನು…?
  •  ನಮ್ಮ ನಾಡು ನುಡಿಯ ಬಗ್ಗೆ ಹೆಮ್ಮೆ ಬೆಳೆಸಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಕನ್ನಡ ಮಾತನಾಡಿದರೆ ನಾಲ್ಕು ಜನರ ಮುಂದೆ ಸಣ್ಣವನಾಗುತ್ತೇನೆ ಎನ್ನುವ ಹಿಂಜರಿಕೆಯನ್ನು ಬಿಟ್ಟು ಎದೆಯುಬ್ಬಿಸಿ ಕನ್ನಡ ಮಾತನಾಡುದನ್ನು ಮೈಗೂಡಿಸಿಕೊಳ್ಳಬೇಕಿದೆ.
  •  ಸಾಧ್ಯವಾದಷ್ಟು ಭಾಷೆಯ ಇತಿಹಾಸವನ್ನು, ಸಾಹಿತ್ಯ –ಕಲೆಯ ಬಗ್ಗೆ ತಿಳಿದುಕೊಂಡು, ನಾಲ್ಕು ಜನರಿಗೆ ತಿಳಿಸುವ ಪ್ರಯತ್ನ ಮಾಡಬೇಕಿದೆ.
  •  ಕನ್ನಡ ಪುಸ್ತಕಗಳನ್ನು ಓದುವ, ಕನ್ನಡ ಚಿತ್ರಗಳನ್ನು, ನಾಟಕಗಳನ್ನು ಪ್ರೋತ್ಸಾಹಿಸುವ, ಸ್ಥಳೀಯ ಕಲೆಗಳನ್ನು ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕಿದೆ.
  •  ಸುತ್ತಮುತ್ತಲಿರುವ ಅನ್ಯಭಾಷಿಕರಿಗೆ ಪ್ರೀತಿಯಿಂದಲೇ ಕನ್ನಡವನ್ನು ಕಲಿಸು ಪ್ರಯತ್ನ ನಡೆಯಬೇಕಿದೆ. ಕನ್ನಡ ಗೊತ್ತಿಲ್ಲದವರಿಗೆ ಚಿಕ್ಕ ಚಿಕ್ಕ ಪದಗಳನ್ನು ಹೇಳಿಕೊಡುವುದು, ದಿನ ನಿತ್ಯ ಅವಶ್ಯವಿರುವ ವಾಕ್ಯ ರಚನೆಯನ್ನು ಕಲಿಸುವ ಪ್ರಯತ್ನ ಮಾಡಬೇಕಿದೆ.
  •  ಬೇರೆ ರಾಜ್ಯದಿಂದ ಬಂದು ಇಲ್ಲಿ ನೆಲೆಸಿರುವ ಕಾರ್ಮಿಕ ವರ್ಗಕ್ಕೆ ತರಗತಿಗೆ ಸೇರಿ ಕನ್ನಡ ಕಲಿಯುವಷ್ಟು ಶಕ್ತಿ ಇರುವುದಿಲ್ಲ ಅಂತವರಿಗೆ ಆಡುವ ಮಾತಿನಲ್ಲೇ, ಸಣ್ಣ-ಪುಟ್ಟ ವ್ಯವಹಾರದಲ್ಲೇ ಕನ್ನಡವನ್ನು ಕಲಿಸುವ ಕಾರ್ಯವಾಗಬೇಕಿದೆ.
  •  ಸಾಧ್ಯವಾದಷ್ಟು ಮಾಲ್ ಗಳಲ್ಲಿ, ಕಾಫಿ ಶಾಪ್ ಗಳಲ್ಲಿ ಕನ್ನಡದಲ್ಲೇ ವ್ಯವಹರಿಸುವುದನ್ನು ಮೈಗೂಡಿಸಿಕೊಳ್ಳಬೇಕಿದೆ. ಆ ಮೂಲಕ ಅಲ್ಲಿರುವ ಇಂಗ್ಲೀಷ್ ವ್ಯಾಮೋಹವನ್ನು ಕಡಿಮೆ ಮಾಡಿ, ಕನ್ನಡಾಭಿಮಾನವನ್ನು ಹೆಚ್ಚಿಸಬೇಕಿದೆ.
  • ಇಂತಹ ಸಣ್ಣ-ಪುಟ್ಟ ಕಾರ್ಯಗಳೆ ನುಡಿಯ ಉಳಿವಿಗೆ ಕಾರಣವಾಗಲಿದೆ. ಹನಿ ಹನಿಗೂಡಿದರೆ ಹಳ್ಳ ಎನ್ನುವಂತೆ ನಾಲ್ಕು ಮಂದಿ ಈ ಕಾರ್ಯಾಕ್ಕೆ ನಿಂತರೆ ಅವರೊಂದಿಗೆ ನಲ್ವತ್ತು ಮಂದಿ ಕೈ ಜೋಡಿಸಲಿದ್ದಾರೆ. ಹೀಗೆ ಈ ಸಂಖ್ಯೆ ಹೆಚ್ಚಾಗುತ್ತಲೇ ಸಾಗುತ್ತದೆ.. ಕನ್ನಡಿಗರೇ ಒಂದಾಗಿ
ಜೈ ಭುವನೇಶ್ವರಿ
Advertisements