kannada-blog

ಕನ್ನಡ ನೆಲದಲ್ಲಿ ಆಗಾಗ ಕನ್ನಡಕ್ಕೆ ಅವಮಾನವಾಗುವಂತಹಾ ಘಟನೆಗಳು ನಡೆಯುತ್ತಾ ಇರುತ್ತವೆ. ಕೆಲವು ದೊಡ್ಡ ಮಟ್ಟದ ಸುದ್ದಿಯಾದರೆ, ಕೆಲವು ಸುದ್ದಿಯಾಗದೆ ಹಾಗೆಯೇ ಮರೆತುಹೋಗುತ್ತವೆ. ಒಟ್ಟಿನಲ್ಲಿ ಸ್ವಾಭಿಮಾನಿ ಕನ್ನಡಿಗರ ಸ್ವಾಭಿಮಾನಕ್ಕೆ ಅವಮಾನವಾಗುವಂತಹಾ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ಇಷ್ಟೆಲ್ಲಾ ಆದರೂ ಸುಸಂಸ್ಕøತ, ವಿಶಾಲ ಹೃದಯದ ಕನ್ನಡಿಗರು ಅವನೆಲ್ಲಾ ನೋಡಿದರೂ ನೋಡದವರಂತೆ ಸುಮ್ಮನೆ ನಮಗ್ಯಾಕೆ ಈ ವಿಚಾರ ಎಂದು ಸುಮ್ಮನಿರುವುದು ಮಾತ್ರ ತುಂಬಾ ನೋವಿನ ಸಂಗತಿ.

       ಸಾಮಾನ್ಯವಾಗಿ ನಾವು ರಾಜ್ಯೋತ್ಸವ ದಿನಗಳಂದು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇವೆ, ಕಾರ್ಯಕ್ರಮದ ಆಯೋಜಕರು ಕೆಲವೊಮ್ಮೆ ರಸಸಂಜೆ ಕಾರ್ಯಕ್ರಮ, ಖ್ಯಾತ ಹಿನ್ನಲೆ ಗಾಯಕರನ್ನು ಕರೆಸಿ ಹಾಡುಗಳನ್ನು ಹಾಡಿಸುವುದನ್ನು ನೋಡಿರುತ್ತೇವೆ. ಹೀಗೆ ಕಾರ್ಯಕ್ರಮ ನಡೆಯುವಾಗ ಮಧ್ಯದಲ್ಲಿ ಯಾರೋ ಒಬ್ಬ ಎದ್ದು ನಿಂತು ರಜನಿಯ ಹಾಡೋ ಅಥವಾ ಚಿರಂಜೀವಿಯ ಹಾಡನ್ನೋ ಹಾಡಿ ಎಂದು ಹೇಳಿದಾಗ ಸುತ್ತಲಿರುವವರು ನಕ್ಕು ಸುಮ್ಮನಾಗುತ್ತೇವೆ. ಆದರೆ ನಿಜವಾಗಿಯೂ ಆ ಸಂದರ್ಭದಲ್ಲಿ ಆತನಿಗೆ ತಾನಿರುವುದು ಕನ್ನಡ ನಾಡಿನಲ್ಲಿ ಎಂದು ಅರ್ಥ ಮಾಡಿಸುವ ಪ್ರಯತ್ನವನ್ನೇ ನಾವು ಮಾಡಲು ಹೋಗುವುದಿಲ್ಲ. ಇದೇ ನಮ್ಮಿಂದ ಆಗುವ ದೊಡ್ಡ ತಪ್ಪು ಎಂದು ಅನ್ನಿಸುತ್ತಿದೆ.

       ಕನಿಷ್ಠಪಕ್ಷ ಕನ್ನಡಕ್ಕೆ ಅವಮಾನವಾಗುವ ಸಂದರ್ಭದಲ್ಲಾದರೂ ಕನ್ನಡಿಗರಾದ ನಾವು ಭಾಷೆಯ ಪರವಾಗಿ ನಿಲ್ಲಬೇಕು ಇಲ್ಲದಿದ್ದಲ್ಲಿ ಅದನ್ನೇ ಕನ್ನಡಿಗರ ದೌರ್ಬಲ್ಯವೆಂದು ತಿಳಿದು ಅದನ್ನೆ ಮುಂದುವರೆಸುತ್ತಾರೆ. ನಾವು ಭಾಷೆಯ ವಿಚಾರದಲ್ಲಿ ಕುರುಡುತನ ತೋರಿಸಿದರೆ ಕನ್ನಡ ಭಾಷೆ ಕೇವಲ ಕರ್ನಾಟಕದ ಹಳ್ಳಿಗಳಿಗೆ ಮಾತ್ರ ಸೀಮಿತವಾಗಿ ಪಟ್ಟಣ ಮತ್ತು ಮಹಾನಗರಗಳಲ್ಲಿ ಕಣ್ಮರೆಯಾಗುತ್ತದೆ. ಕನ್ನಡಕ್ಕೆ ಅವಮಾನ ಮಾಡಿದವನಿಗೆ ಹೊಡೆದು ಬುದ್ಧಿಕಲಿಸುವ ಅಗತ್ಯವಿಲ್ಲ, ಅವನಿಗೆ ಕನ್ನಡ ನಾಡಿನಲ್ಲಿ ನೀನು ಬದುಕುತ್ತಿದ್ದೀಯ, ಈ ನೆಲ ನಿನಗೆ ಅನ್ನವನ್ನು ಕೊಡುತ್ತಿದೆ ಎಂದು ತಿಳಿ ಹೇಳಬೇಕು, ಆಗ ಆತನಿಗೆ ತನ್ನ ತಪ್ಪಿನ ಅರಿವಾಗುತ್ತದೆ.

        ಹೀಗೆ ರಾಜ್ಯೋತ್ಸವದ ಸಂದರ್ಭದಲ್ಲಿ ಬೇರೆ ಭಾಷೆಯ ಹಾಡುಗಳನ್ನು ಹಾಡಿದರೂ ನಾವು ವಿರೋಧಿಸುತ್ತಿಲ್ಲ, ದೊಡ್ಡ ದೊಡ್ಡ ಮಾಲ್‍ಗಳಲ್ಲಿ ಕನ್ನಡ ಹಾಡು ಹಾಕಬೇಕಾದರೆ ನಾವೇ ಪ್ರತಿಭಟಿಸಿ ಅದನ್ನು ಪ್ರಸಾರ ಮಾಡಿಸಿಕೊಳ್ಳಬೇಕಾದ ದುರ್ಗತಿ ಬಂದಿದೆ. ಬೆಂಗಳೂರಿನಲ್ಲಿ ಕನ್ನಡ ಚಲನಚಿತ್ರಗಳಿಗೆ ಚಿತ್ರಮಂದಿರ ಸಿಗುತ್ತಿಲ್ಲ, ವರ್ಷಕ್ಕೆ ಒಂದು ಚಿತ್ರವನ್ನಾದರೂ ಹಾಕಬೇಕೆಂಬ ನಿಯಮವನ್ನು ಕೂಡ ಅವರು ಪಾಲನೆ ಮಾಡುತ್ತಿಲ್ಲ, ಇದೆಲ್ಲ ಇಂದು ನಮ್ಮ ಭಾಷೆಯ ಉಳಿವಿನ ಪ್ರಶ್ನೆಯಾಗಿದೆ.

        ಇತರ ರಾಜ್ಯಗಳಿಗೆ ಹೋಗಿ ಜೀವನ ಸಾಗಿಸಲು ಆಯಾ ರಾಜ್ಯದ ಭಾಷೆಯನ್ನು ಕಲಿಯುತ್ತಿರುವ ಕನ್ನಡಿಗರಂತೆ ಇಲ್ಲಿ ಇರುವ ಬೇರೆ ರಾಜ್ಯದ ಜನ ಕನ್ನಡ ಕಲಿಯಬೇಕೆಂಬ ವಿಚಾರದ ಕಡೆಗೆ ಗಮನ ಹರಿಸದಿರಲು ಕಾರಣಗಳೇನು ಅಂತ ಯೋಚಿಸಿದಾಗ, ತಪ್ಪು ನಮ್ಮ ಕನ್ನಡಿಗರದ್ದೇ ಹೆಚ್ಚು ಕಂಡುಬರುತ್ತದೆ. ನಾವು ಅವರೊಂದಿಗೆ ಇಂಗ್ಲೀಷ್ ಭಾಷೆ ಅಥವಾ ಹಿಂದಿಯಲ್ಲಿ ಸಂವಹನ ನಡೆಸುತ್ತೇವೆ ಹಾಗಾಗಿ ಅವರಿಗೆ ಕನ್ನಡ ಕಲಿಯುವ ಅಗತ್ಯವೇ ಕಾಣುತ್ತಿಲ್ಲ. ಇದನ್ನು ಕನ್ನಡಿಗರ ವಿಶಾಲ ಹೃದಯವೆಂದು ಕರೆಯಬಹುದೋ ಅಥವಾ ನಮ್ಮ ಭಾಷೆಯ ಮೇಲಿನ ಅಭಿಮಾನದ ಕೊರತೆಯೆಂದು ತಿಳಿಯಬೇಕೋ ಗೊತ್ತಾಗುತ್ತಿಲ್ಲ.

       ಸಾಧ್ಯವಾದಷ್ಟು ನಮ್ಮ ಸುತ್ತಮುತ್ತ ಕನ್ನಡದ ನಾಮ ಫಲಕಗಳನ್ನು ಬಳಸುವಂತೆ ಎಲ್ಲರಿಗೂ ತಿಳಿಹೇಳಬೇಕು, ಜೊತೆಗೆ ನಾವು ಕೂಡ ಅದನ್ನು ಅನುಸರಿಸಬೇಕು. 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು ಮುಂಚೂಣಿಯಲ್ಲಿರುವ ಕನ್ನಡ ಭಾಷೆ ಕೇವಲ ಹೆಸರಿಗಷ್ಟೇ ಭಾಷೆಯಾಗಿ ಉಳಿಯದಂತೆ ಕಾಪಾಡಬೇಕಾದ ಅನಿವಾರ್ಯ ಸ್ಥಿತಿ ಇಂದು ಬಂದಿದೆ. ಬರಿ ಕನ್ನಡ ಬಾವುಟಗಳನ್ನು ಹಾರಿಸುವುದರಿಂದ ಭಾಷೆಯನ್ನು ಬೆಳೆಸಿದಂತಲ್ಲ, ಸಾಧ್ಯವಾದಷ್ಟು ಕನ್ನಡವನ್ನು ನಮ್ಮ ನಿತ್ಯದ ಬದುಕಿನಲ್ಲಿ ಮತ್ತು ಸುತ್ತಮುತ್ತಲಿನವರ ಜೊತೆಗಿನ ವ್ಯವಹಾರದ ಸಂದರ್ಭದಲ್ಲಿ ಬಳಸುತ್ತಾ ಹೋಗಬೇಕು ಆಗ ಮಾತ್ರ ಒಂದು ಭಾಷೆ ಬೆಳೆಯಲು ಸಾಧ್ಯ.

        ಈ ಸಂದಭದಲ್ಲಿ ಭಾಷೆಯ ಬಗ್ಗೆ ವಿವರಿಸಲು ಕೂಡ ಒಂದು ಕಾರಣವಿದೆ. ಈಗ ಡಿಸೆಂಬರ್ ತಿಂಗಳು ಸಮೀಪಿಸುತ್ತಿದೆ, ನವೆಂಬರ್ ತಿಂಗಳಿನಲ್ಲಿ ಮಾತ್ರ ಕನ್ನಡ, ಕನ್ನಡ ಎಂದು ಕೂಗುವವರು ಡಿಸೆಂಬರ್ ಬಂದರೆ ಕಣ್ಮರೆಯಾಗುತ್ತಾರೆ. ಹಾಗಾಗಿ ಇನ್ನು ಮುಂದಾದರೂ ನಾವೆಲ್ಲರು ಕೇವಲ ನವೆಂಬರ್ ಕನ್ನಡಿಗರಾದೆ ವರ್ಷಪೂರ್ತಿ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ಪ್ರಯತ್ನವನ್ನು ಮಾಡೋಣ. ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಕನ್ನಡ ನಾಡು, ನುಡಿಗಾಗಿ ಹೋರಾಡುವ ಮನಃಸ್ಥಿತಿಯನ್ನು ಕರುಣಿಸಲಿ ಎಂದು ಈ ಮೂಲಕ ಪ್ರಾರ್ಥಿಸುತ್ತೇವೆ.

                  ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ.

Advertisements