Timmakka.png

ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದಲ್ಲಿ ಜನಿಸಿದವರು. ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಸಾಕಿ ಬೆಳೆಸಿದ ಮಹಾತಾಯಿ ಈಕೆ. ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಸಾಧನೆಯನ್ನು ಮಾಡಿರುವುದನ್ನು ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳು ಗುರುತಿಸಿ ಇವರನ್ನು ಪುರಸ್ಕರಿಸಿವೆ. ಅವರ ಈ ಸಾಧನೆಗಾಗಿ ಭಾರತದ ರಾಷ್ಟ್ರೀಯ ಪೌರ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು. ಅಮೇರಿಕ ಸಂಯುಕ್ತ ಸಂಸ್ಥಾನದ ಲಾಸ್ ಏಂಜಲೀಸ್, ಓಕ್‍ಲ್ಯಾಂಡ್, ಕ್ಯಾಲಿಫೋರ್ನಿಯಾಗಳಲ್ಲಿ ಸ್ಥಾಪಿತವಾಗಿರುವ ಪರಿಸರ ಶಿಕ್ಷಣಕ್ಕಾಗಿ ತಿಮ್ಮಕ್ಕನವರ ಸಂಪನ್ಮೂಲಗಳು ಎಂಬ ಪರಿಸರವಾದಿ ಸಂಘಟನೆಯ ಹೆಸರನ್ನು ತಿಮ್ಮಕ್ಕನವರನ್ನು ಆಧರಿಸಿ ಇಡಲಾಗಿದೆ.

ಬಡ ಕುಟುಂಬದಲ್ಲಿ ಜನಸಿದ ಇವರು ಯಾವುದೇ ಔಪಚಾರಿಕ ಶಿಕ್ಷಣವನ್ನು ಪಡೆಯಲಿಲ್ಲ, ಅಲ್ಲೆ ಹತ್ತಿರದ ಒಂದು ಕಲ್ಲು ಗಣಿಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡಿದರು. ಇವರು ಚಿಕ್ಕಯ್ಯ ಎಂಬುವವರನ್ನು ಮದುವೆಯಾದರು. ದುರಾದೃಷ್ಟವಶಾತ್ ಇವರಿಗೆ ಮಕ್ಕಳಾಗಲಿಲ್ಲ. ಈ ದುಃಖವನ್ನು ಮರೆಯಲು ಆಲದ ಮರಗಳನ್ನು ನೆಟ್ಟು ಬೆಳೆಸಿ ಅದರ ಮೂಲಕ ಮಕ್ಕಳ ಪ್ರೀತಿಯನ್ನು ಕಾಣಲು ಪ್ರಾರಂಭಿಸಿದರು.

ತಿಮ್ಮಕ್ಕನವರ ಹಳ್ಳಿಯ ಬಳಿ ಆಲದ ಮರಗಳು ಹೇರಳವಾಗಿದ್ದವು. ತಿಮ್ಮಕ್ಕ ಮತ್ತು ಅವರ ಪತಿ ಆ ಮರಗಳಿಂದ ಸಸಿ ಮಾಡಲು ಪ್ರಾರಂಭಿಸಿದರು. ಮೊದಲ ವರ್ಷ ಹತ್ತು ಸಸಿಗಳನ್ನು ನೆರೆಯ ಕೂದೂರು ಹಳ್ಳಿಯ ಬಳಿ 4 ಕಿ,ಮೀ ಉದ್ದಳತೆಯ ದುರ ನೆಟ್ಟರು.ಹೀಗೆ ವರ್ಷ ಹೋದಂತೆ ಸಸಿಗಳ ಸಂಖ್ಯೆಯನ್ನು ಹೆಚ್ಚಿಸುತ್ತಾ ಹೋದರು. ತಮ್ಮ ಅಲ್ಪ ಆದಾಯವನ್ನು ಈ ಕಾರ್ಯಕ್ಕೆ ಬಳಸಿಕೊಂಡರು. ಸಸಿಗಳಿಗೆ ನೀರಿನ ಅಗತ್ಯವಿರುವುದರಿಂದ ಮಳೆಗಾಲದಲ್ಲಿ ನೆಡುತ್ತಿದ್ದರು.

ತಿಮ್ಮಕ್ಕನವರು ತಮ್ಮ ಬದುಕಿನಲ್ಲಿ ಸರಿಸುಮಾರು ಹತ್ತು ಸಾವಿರಕ್ಕೂ ಹೆಚ್ಚಿನ ಗಿಡಗಳನ್ನು ನೆಟ್ಟು ಆರೈಕೆ ಮಾಡಿ ಬೆಳೆಸಿದ್ದಾರೆ. ಇಂತಹಾ ಮಹಾನ್ ವ್ಯಕ್ತಿಯನ್ನು ಹೊಂದಿರುವ ನಮ್ಮ ನಾಡು ಧನ್ಯ.

ಇವರ ಈ ಸಾಧನೆಗೆ ದೊರೆತ ಪ್ರಶಸ್ತಿಗಳೆಂದರೆ:-

 • ರಾಷ್ಟ್ರೀಯ ಪೌರ ಪ್ರಶಸ್ತಿ
 • ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ
 • ವೀರಚಕ್ರ ಪ್ರಶಸ್ತಿ
 • ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ
 • ಗಾಡ್‍ಫ್ರಿ ಫಿಲಿಫ್ಸ್ ಧೀರತೆ ಪ್ರಶಸ್ತಿ
 • ಪಂಪಾಪತಿ ಪರಿಸರ ಪ್ರಶಸ್ತಿ
 • ಬಾಬಾ ಸಾಹೇಬ್ ಅಂಬೇಡ್ಕರ್ ಪ್ರಶಸ್ತಿ
 • ವನಮಾತೆ ಪ್ರಶಸ್ತಿ
 • ಮಾಗಡಿ ವ್ಯಕ್ತಿ ಪ್ರಶಸ್ತಿ
 • ಶ್ರೀಮಾತಾ ಪ್ರಶಸ್ತಿ
 • ಎಚ್.ಹೊನ್ನಯ್ಯ ಸಮಾಜಸೇವಾ ಪ್ರಶಸ್ತಿ
 • ಕರ್ನಾಟಕ ಪರಿಸರ ಪ್ರಶಸ್ತಿ
 • ಮಹಿಳಾರತ್ನ ಪ್ರಶಸ್ತಿ
 • ನ್ಯಾಷನಲ್ ಸಿಟಿಜನ್ ಪ್ರಶಸ್ತಿ
 • ರಾಜ್ಯೋತ್ಸವ ಪ್ರಶಸ್ತಿ
 • ಹೂವಿನಹೊಳೆ ಪ್ರತಿಷ್ಠಾನದ ವಿಶ್ವಾತ್ಮ ಪ್ರಶಸ್ತಿ
 • ಆರ್ಟ್ ಆಫ್ ಲೀವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ
 • 2010ರ ಸಾಲಿನ ಪ್ರತಿಷ್ಠಿತ ನಾಡೋಜ ಪ್ರಶಸ್ತಿ ಲಭಿಸಿವೆ

ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ತಿಮ್ಮಕ್ಕನವರು 2016 ನೇ ಸಾಲಿನ ವಿಶ್ವದ ನೂರು ಪ್ರಭಾವಿ ಮಹಿಳೆಯರ ಸಾಲಿನಲ್ಲಿ ಕೂಡ ಸ್ಥಾನಪಡೆದು ನಮ್ಮ ದೇಶಕ್ಕೆ ಮತ್ತು ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದಾರೆ. ಈ ಮೂಲಕ ನಮಗೆ ತಿಳಿಯುವುದೆಂದರೆ ವಿದ್ಯಾವಂತರೆಲ್ಲರೂ ಜ್ಞಾನಿಗಳಲ್ಲವೆಂದು, ಒಬ್ಬ ಅನಕ್ಷರಸ್ಥೆಯಾಗಿ ಇವರು ಮಾಡಿದ ಕಾರ್ಯಗಳ ಅರ್ಧದಷ್ಟು ಪ್ರಕೃತಿಯನ್ನು ಕಾಪಾಡುವ ಕಾರ್ಯವನ್ನು ವಿದ್ಯಾವಂತರು ಮಾಡಿದ್ದರೆ ಇಂದು ನಮಗೆ ಈ ವಾಯುಮಾಲಿನ್ಯ, ಬರ ಹಾಗೂ ಜಲ ಮಾಲಿನ್ಯದಂತಹಾ ದೊಡ್ಡ ಸಮಸ್ಯೆಗಳು ಎದುರಾಗುತ್ತಿರಲಿಲ್ಲ. ಇನ್ನು ಮುಂದಾದರೂ ಇವರನ್ನು ನೋಡಿ ನಾಗರೀಕ ಸಮಾಜ ಪ್ರಕೃತಿಯ ಅಗತ್ಯತೆಯನ್ನು ಅರಿತು ಪರಿಸರ ಸಂರಕ್ಷಣೆಯ ಕಡೆಗೆ ಗಮನ ಹರಿಸಬೇಕಾಗಿದೆ.

ನಮ್ಮ ಸಾಲುಮರದ ತಿಮ್ಮಕ್ಕ ಇಂದಿನ ಯುವಜನತೆಗೆ ಮಾದರಿಯಾಗಲಿ, ಅವರ ಪರಿಸರ ಸಮರಕ್ಷಣೆಯ ಬಗೆಗಿನ ಹೋರಾಟ ಹೀಗೆ ಸದಾ ಮುಂದುವರೆಯಲಿ ಮತ್ತು ಇನ್ನಷ್ಟು ಗಿಡಗಳನ್ನು ನೆಡುವ ಶಕ್ತಿ ದೇವರು ಅವರಿಗೆ ಕರುಣಿಸಲಿ ಎಂದು ಈ ಮೂಲಕ ಆಶಿಸುತ್ತೇವೆ.

Advertisements