pravasi-bharatiya-divas
‘ಪ್ರವಾಸಿ ಭಾರತ್ ದಿವಸ್’! ಇತ್ತೀಚೆಗೆ ಹೆಚ್ಚಾಗಿ ಕೇಳಿಬರುತ್ತಿರುವ ಶಬ್ದವಿದು. ಏನಿದು ‘ಪ್ರವಾಸಿ ಭಾರತ್ ದಿವಸ್’? ಕನ್ನಡಿಗರು ಯಾಕೆ ಇದರ ಕುರಿತು ಅತ್ಯಂತ ಕುತೂಹಲಿಗಳಾಗಿದ್ದಾರೆ? ಮೊದಲಾದ ಪ್ರಶ್ನೆಗಳು ಹುಟ್ಟುವುದು ಸಹಜ. ‘ಪ್ರವಾಸಿ ಭಾರತ್ ದಿವಸ್’ ಕುರಿತಾದ ಸಹಜ ಕುತೂಹಲವನ್ನು ತಣಿಸಲು ಮುಂದೆ ಓದಿ.
   ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದವರು. ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ಹಕ್ಕುಗಳಿಗಾಗಿ ಹೋರಾಡಿ, ಆನಂತರ ಭಾರತಕ್ಕೆ ಮರಳಿ ಬಂದು ಇಲ್ಲಿ ಸ್ವಾತಂತ್ರ್ಯದ ಕಹಳೆ ಊದಿದ್ದು ಇತಿಹಾಸದ ಪುಟಗಳಲ್ಲಿ ಸ್ವರ್ಣಾಕ್ಷರಗಳಲ್ಲಿ ದಾಖಲಾಗಿದೆ. 1915ರ ಜನವರಿ 9ರಂದು ಮಹಾತ್ಮಾ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿ ಬಂದರು. ಆ ದಿನದ ನೆನಪಿಗಾಗಿ ‘ಪ್ರವಾಸಿ ಭಾರತ್ ದಿವಸ್’ ಅನ್ನು 2003ರಿಂದ ಆಚರಿಸಿಕೊಂಡು ಬರಲಾಗುತ್ತಿದೆ. ವಿದೇಶದಲ್ಲಿ ನೆಲೆಸಿದ ಭಾರತೀಯರು ದೇಶಕ್ಕೆ ನೀಡಿದ ಕೊಡುಗೆಯನ್ನು ನೆನಪಿಸುವ ದಿನವೂ ಇದಾಗಿದೆ.
   2017ರ ‘ಪ್ರವಾಸಿ ಭಾರತ್ ದಿವಸ್’ ಆಚರಣೆಯನ್ನು ನಮ್ಮ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. 2017ರ ಜನವರಿ 7ರಿಂದ 9ರವರೆಗೆ ಸಮಾವೇಶ ನಡೆಯಲಿದ್ದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾರ್ಯಕ್ರಮದ ರೂಪುರೇಷೆಯನ್ನು ಸಿದ್ಧಪಡಿಸಿದ್ದಾರೆ. ಭಾರತದ ಸುಮಾರು ಎರಡೂವರೆ ಕೋಟಿ ಜನರು ವಿದೇಶಗಳ್ಲಲಿ ನೆಲೆಸಿದ್ದಾರೆ. ಈ ಬಾರಿ ಸಮಾವೇಶದಲ್ಲಿ 3,000ಕ್ಕೂ ಅಧಿಕ ಅನಿವಾಸಿ ಭಾರತೀಯರು ಭಾಗವಹಿಸುವ ನಿರೀಕ್ಷೆ ಮಾಡಲಾಗಿದೆ.
   ಅನಿವಾಸಿ ಭಾರತೀಯರಿಗೆ ಅನುಕೂಲವಾಗುವಂತೆ ಕರ್ನಾಟಕ ಸರ್ಕಾರ ಪ್ರತ್ಯೇಕ ನೀತಿಯೊಂದನ್ನು ಜಾರಿಗೊಳಿಸಲಿದೆ. ನಮ್ಮ ಬೆಂಗಳೂರಿನಲ್ಲಿ ಈಗಾಗಲೇ ಅನಿವಾಸಿ ಭಾರತೀಯರ ವೇದಿಕೆ ಇದ್ದು, ವಿಶೇಷ ಘಟಕವನ್ನೂ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ. ಕರ್ನಾಟಕದ ವಿಶೇಷತೆಯೆಂದರೆ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಆದ್ಯತೆ ನೀಡಿ, ಅತಿ ಹೆಚ್ಚು ಬಂಡವಾಳ ಆಕರ್ಷಿಸಿದ ದೇಶದ ಎರಡನೇ ಅತಿದೊಡ್ಡ ರಾಜ್ಯ! ಕಳೆದ ವರ್ಷ ದೇಶದಲ್ಲಿ ಹೂಡಿಕೆಯಾದ ರೂ.3.1 ಲಕ್ಷ ಕೋಟಿಯಲ್ಲಿ ಶೇ.38.34ರಷ್ಟು ಪಾಲನ್ನು ನಮ್ಮ ಕರ್ನಾಟಕ ತನ್ನದಾಗಿಸಿಕೊಂಡಿದೆ.
   ಈ ಎಲ್ಲ ಹಿನ್ನೆಲೆಯಲ್ಲಿ 2017ರ ‘ಪ್ರವಾಸಿ ಭಾರತ್ ದಿವಸ್’ ಕನ್ನಡಿಗರಲ್ಲಿ ನಿರೀಕ್ಷೆಯನ್ನು ಮೂಡಿಸಿದೆ. ನಮ್ಮ ಕರ್ನಾಟಕ ‘ಪ್ರವಾಸಿ ಭಾರತ್ ದಿವಸ’ದ 14ನೇ ಅವತರಿಣಿಕೆಗೆ ಸರ್ವಸನ್ನದ್ದವಾಗಿದೆ.
Advertisements