Kanavi.png

ಕನ್ನಡದ ಸಮನ್ವಯ ಕವಿ ಎಂದೊಡನೆ ನೆನಪಾಗುವವರೇ ಚೆನ್ನವೀರ ಕಣವಿಯವರು. ಭಾವಜೀವಿ, ಸೌಜನ್ಯದ ಕವಿ ಈ ಬಾರಿಯ ನಾಡಹಬ್ಬ ದಸರಾವನ್ನು ಉದ್ಘಾಟನೆ ಮಾಡಲಿದ್ದಾರೆ ಎನ್ನುವುದೇ ಕನ್ನಡ ನಾಡಿನ ಹೆಮ್ಮೆಯ ವಿಷಯ. ಈ ಹಿನ್ನೆಲೆಯಲ್ಲಿ ಕವಿ ಚೆನ್ನವೀರ ಕಣವಿಯವರ ಕುರಿತಾದ ಸಂಕ್ಷಿಪ್ತ ಪರಿಚಯ ಇಲ್ಲಿದೆ.

   ಚೆನ್ನವೀರ ಕಣವಿಯವರು ಹುಟ್ಟಿದ್ದು 1928 ಜೂನ್ 28ರಂದು, ಗದಗದ ಹೊಂಬಳ ಗ್ರಾಮದಲ್ಲಿ. ತಂದೆ ಶ್ರೀ ಸಕ್ಕರೆಪ್ಪನವರು ವೃತ್ತಿಯಿಂದ ಶಿಕ್ಷಕರು, ತಾಯಿ ಪಾರ್ವತವ್ವ. ಗದಗ ಜಿಲ್ಲೆಯ ಶಿರುಂದ ಗ್ರಾಮದಲ್ಲಿ ಬಾಲ್ಯವನ್ನು ಕಳೆದ ಕಣವಿಯವರು, ಹೈಸ್ಕೂಲು ಶಿಕ್ಷಣಕ್ಕಾಗಿ ಧಾರವಾಡದ ಮುರುಗಾಮಠದ ಉಚಿತ ಪ್ರಸಾದ ನಿಲಯ ಸೇರಿಕೊಂಡರು. ಅಲ್ಲಿ ಮೃತ್ಯುಂಜಯ ಸ್ವಾಮಿಯವರ ಪ್ರಭಾವಕ್ಕೆ ಒಳಗಾದ ಚೆನ್ನವೀರ ಕಣವಿಯವರು, ಮಲ್ಲಿಕಾರ್ಜುನ ಮನ್ಸೂರ, ಬಸವರಾಜ ರಾಜೀಗುರು ಮೊದಲಾದವರು ಹಾಡುತ್ತಿದ್ದ ವಚನ ಕೇಳಿ ಸಾಹಿತ್ಯ-ಸಂಗೀತದೆಡೆಗೆ ಮಾರುಹೋದರು. ಮುಂದೆ ಬಿ.ಎ ಪದವಿಗಾಗಿ ಕರ್ನಾಟಕ ಕಾಲೇಜು ಸೇರಿದ ಮೇಲೆ ಚೆನ್ನವೀರ ಕಣವಿಯೊಳಗಿನ ಕವಿ ಪ್ರಕಟಗೊಂಡಿದ್ದ. 1949ರಲ್ಲಿ ಅವರ ಮೊದಲ ಕವನ ಸಂಕಲನ ‘ಕಾವ್ಯಾಕ್ಷಿ’ಯು ಬಿಡುಗಡೆಯಾಯಿತು.

   ಅಲ್ಲಿಂದ ಆರಂಭವಾದ ಅವರ ಸಾಹಿತ್ಯ ಕೃಷಿ ನಾಡಿನಾದ್ಯಂತ ಜನಜನಿತವಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳಲಿಲ್ಲ. ವ್ಯಕ್ತಿಗಳ ಕುರಿತು ಇವರು ಬರೆದಷ್ಟು ಕವನಗಳನ್ನು ಕನ್ನಡದಲ್ಲಿ ಮತ್ಯಾರೂ ಬರೆದಿಲ್ಲ! ಅವುಗಳಲ್ಲಿ ಒಂದು ‘ಮಧುರಚೆನ್ನರ ನೆನಪಿಗೆ’ ಎನ್ನುವುದು. ವ್ಯಕ್ತಿಯ ನೈಜ ಚಿತ್ರಣವನ್ನು ಕವನಗಳ ಮೂಲಕ ಇವರು ಬಿಚ್ಚಿಡುವ ಬಗೆಯೇ ಅನೂಹ್ಯ.

   ಚೆನ್ನವೀರ ಕಣವಿಯವರು ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇದೀಗ ಅವರು ಈ ಬಾರಿಯ ದಸರಾ ಹಬ್ಬವನ್ನು ಉದ್ಘಾಟನೆ ಮಾಡಲಿದ್ದು, ಇದು ಅವರೆಡೆಗಿನ ಕನ್ನಡಿಗರ ಗೌರವವನ್ನು ತೋರಿಸುತ್ತದೆ.

Advertisements