kannadafilmindustry

ವಾರಾಂತ್ಯದಲ್ಲಿ ಕನ್ನಡ ಸಿನೆಮಾ ನೋಡಲೆಂದು ಚಿತ್ರಮಂದಿರಕ್ಕೆ ಹೋದರೆ ಎದುರಾದದ್ದು ‘ಹೌಸ್‍ಫುಲ್’ ಫಲಕ! ಸರಿ, ವಾರದ ದಿನಗಳಲ್ಲಿ ಹೋಗೋಣ ಎಂದರೆ, ಉಹ್ಞೂಂ..ಟಿಕೆಟ್ ಇಲ್ಲ. ಎಲ್ಲ ಕಡೆ ಮತ್ತೆ ಹೌಸ್‍ಫುಲ್! ಅದೂ ಸಹ ಯಾವುದೋ ಒಂದು ಚಿತ್ರಕ್ಕಲ್ಲ, ಕನ್ನಡದ ಹೆಚ್ಚಿನ ಎಲ್ಲ ಚಿತ್ರಗಳೂ ಸಹ ತುಂಬಿದ ಗೃಹದ ಪ್ರದರ್ಶನ ನೀಡುತ್ತಿವೆ. ಟಿಕೆಟ್ ಸಿಗಲಿಲ್ಲವೆಂಬ ಬೇಸರಕ್ಕಿಂತ ಹೆಚ್ಚಾಗಿ ಕನ್ನಡ ಚಿತ್ರಗಳು ಜನರನ್ನು ಕರೆತಂದು ಕೂರಿಸುವಲ್ಲಿ ಯಶಸ್ವಿಯಾಗಿವೆಯಲ್ಲ ಎನ್ನುವುದು ಸಂತೋಷದ ವಿಷಯ.

   ಇತ್ತೀಚಿನ ವರ್ಷಗಳಲ್ಲಿ ಕನ್ನಡ ಚಿತ್ರರಂಗ ಹಲವು ತರಹದ ಏಳುಬೀಳುಗಳಿಗೆ ಸಾಕ್ಷಿಯಾಗಿದೆ. ಎಲ್ಲಿ ನೋಡಿದರೂ ರಿಮೇಕ್ ಚಿತ್ರಗಳ ಹಾವಳಿ, ಅಪರೂಪಕ್ಕೊಂದು ಸ್ವಮೇಕ್ ಚಿತ್ರ ಬಂದರೂ ಗುಣಮಟ್ಟದ ಕೊರತೆ, ಹೊಸಬಗೆಯ ಪ್ರಯತ್ನ ಮಾಡಲು ಮುಂದೆ ಬಾರದ ನಿರ್ದೇಶಕರು, ಯಾವುದೋ ಸಿದ್ಧಸೂತ್ರಗಳಿಗೆ ಜೋತುಬಿದ್ದ ನಿರ್ಮಾಪಕರು ಸೇರಿದಂತೆ ಹಲವು ಕಾರಣಗಳು ಕನ್ನಡ ಚಿತ್ರರಂಗವನ್ನು ಮಸುಕುಗೊಳಿಸಿದ್ದವು. ಕನ್ನಡದ ಪ್ರೇಕ್ಷಕ ಜಾಗತಿಕ ಮಟ್ಟದ ಚಿತ್ರಗಳನ್ನು ನೋಡಿ ತನ್ನ ಅಭಿರುಚಿಯನ್ನು ವಿಸ್ತರಿಸಿಕೊಂಡಿದ್ದರೂ, ನಿರ್ದೇಶಕರು ಸಿದ್ಧಸೂತ್ರಕ್ಕೆ ಗಂಟುಬಿದ್ದು ಸೋಲಿನ ಸುಳಿಗೆ ಸಿಲುಕಿದ್ದರು.

   ಹೊಸತಲೆಮಾರಿನ ಚಿತ್ರಕರ್ಮಿಗಳು ಕನ್ನಡ ಚಿತ್ರರಂಗವನ್ನು ಕೈಗೆತ್ತಿಕೊಂಡಿದ್ದೇ ತಡ, ಭಾರತೀಯ ಚಿತ್ರರಂಗದ ಬೆರಗುಗಣ್ಣುಗಳು ಇಲ್ಲಿನ ಬೆಳವಣಿಗೆಗಳನ್ನು ಗಮನಿಸತೊಡಗಿದವು. ಕ್ರಿಯಾಶೀಲತೆ, ಸೃಜನಾತ್ಮಕತೆ, ಸೂಕ್ಷ್ಮ ಸಂವೇದನೆ, ಪ್ರಾದೇಶಿಕತೆ ಇವೆಲ್ಲವನ್ನೂ ಒಳಗೊಂಡ ಕಲಾಕೃತಿಗಳು ಕನ್ನಡದ ಚಿತ್ರರಂಗವನ್ನು ಸಮೃದ್ಧಗೊಳಿಸತೊಡಗಿವೆ. ಲೂಸಿಯಾ, ಉಳಿದವರು ಕಂಡಂತೆ, ರಂಗಿತರಂಗ, ಮೈತ್ರಿ, ತಿಥಿ, ಯೂ ಟರ್ನ್, ಕರ್ವ, ಗೋಧಿ ಬಣ್ಣ ಸಾಧಾರಣ ಮೈಕಟ್ಟು ಹೀಗೆ ಇವೆಲ್ಲ ಚಿತ್ರಗಳು ಮಸಾಲೆ ರಹಿತವಾಗಿದ್ದರೂ ಕೂಡ ಜನರ ಮನಸ್ಸನ್ನು ಗೆಲ್ಲುವಲ್ಲಿ ಸಫಲವಾಗಿವೆ. ಅದರರ್ಥ ಸಿದ್ಧಸೂತ್ರಗಳ ಹೊರತಾಗಿಯೂ ಸಂವೇದನಾತ್ಮಕ ಚಿತ್ರಗಳು ಕನ್ನಡದ ಜನಕ್ಕೆ ಬೇಕಿವೆ ಎಂಬುದು. ಪ್ರೇಕ್ಷಕರ ಅಭಿರುಚಚಿಯೂ ಬದಲಾಗಿದೆ. ಅದಕ್ಕೆ ತಕ್ಕಂತೆ ಕನ್ನಡ ಚಿತ್ರರಂಗವೂ ಮಗ್ಗುಲು ಬದಲಿಸಿದೆ.

   ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರಗಳನ್ನು ನೀಡುವ ಜೊತೆಗೆ ಮಾರುಕಟ್ಟೆಯನ್ನು ವಿಸ್ತರಿಸುವ ಹೊಣೆಯೂ ನವ ಚಿತ್ರಕರ್ಮಿಗಳ ಮೇಲಿದೆ. ತಾರಾನಟರು ಎನ್ನುವ ಪರಿಕಲ್ಪನೆ ಈಗ ಬದಲಾಗಿ, ಉತ್ತಮ ಚಿತ್ರಕಥೆ, ತಾಂತ್ರಿಕತೆ, ಚಿತ್ರವನ್ನು ಕಟ್ಟಿಕೊಡುವಿಕೆ ಮೊದಲಾದ ಅಂಶಗಳು ಹೆಚ್ಚಿನ ಪ್ರಾಮುಖ್ಯತೆ ಪಡೆದಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಚಿತ್ರಗಳು ಗಮನಸೆಳೆಯುವಲ್ಲಿ ಯಶಸ್ವಿಯಾಗಿವೆ. ಈ ಎಲ್ಲ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗ ಒಂದು ಮಹತ್ತರ ಘಟ್ಟಕ್ಕೆ ಬಂದು ನಿಂತಿರುವುದು ನಿಶ್ಚಿತ. ಇದು ಉತ್ತಮ ಬೆಳವಣಿಗೆ ಹಾಗೂ ಕನ್ನಡದ ಮಟ್ಟಿಗೆ ಇಂತಹ ಕಾಲಘಟ್ಟ ಸದಾಕಾಲ ಇರಬೇಕಾದ ಅನಿವಾರ್ಯತೆ.

Advertisements