DSC01324__75869.1394534611.1280.1280

ಕನ್ನಡ ನಾಡು ‘ಶ್ರೀಗಂಧದ ಬೀಡು’ ಎಂಬ ಖ್ಯಾತಿ ಹೊಂದಿದೆ. ಚಂದನವನದ ಸುಗಂಧ ದೇಶ-ವಿದೇಶಗಳಲ್ಲಿ ಪಸರಿಸಿದೆ. ಶ್ರೀಗಂಧದ ಉತ್ಪನ್ನಗಳ ಮೂಲಕ ಕನ್ನಡ ನಾಡಿನ ಹಿರಿಮೆಯನ್ನು ಎಲ್ಲೆಡೆ ಪ್ರಚುರಪಡಿಸಿದ ಕೀರ್ತಿ ಮೈಸೂರು ಸಾಬೂನು ಕಾರ್ಖಾನೆಗೆ ಸಲ್ಲುತ್ತದೆ. ಇದೀಗ 100 ವರ್ಷದ ಸಂಭ್ರಮದಲ್ಲಿರುವ ಮೈಸೂರು ಸಾಬೂನು ಕಾರ್ಖಾನೆ ಪ್ರಾರಂಭವಾಗಿದ್ದರ ಹಿಂದೆ ಕುತೂಹಲಕಾರಿಯಾದ ಕಥೆಯಿದೆ.

   19 ಹಾಗೂ 20ನೇ ಶತಮಾನದಲ್ಲಿ ಶ್ರೀಗಂಧಕ್ಕೆ ಪ್ರಸಿದ್ಧವಾದದ್ದು ನಮ್ಮ ಕನ್ನಡ ನಾಡು. ಯುರೋಪ್ ಇಲ್ಲಿನ ಶ್ರೀಗಂಧಕ್ಕೆ ಮಾರುಹೋಗಿತ್ತು. ಇಂಗ್ಲೆಂಡ್ ಇಲ್ಲಿಂದ ಶ್ರೀಗಂಧದ ಮರಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಮೊದಲ ಜಾಗತಿಕ ಯುದ್ಧದ ಸಮಯದಲ್ಲಿ ಶ್ರೀಗಂಧದ ಮರಗಳನ್ನು ರಫ್ತು ಮಾಡಲು ತೊಡಕುಂಟಾಗಿ, ಅವುಗಳನ್ನು ಬೆಂಗಳೂರಿನ ಮಲ್ಲೇಶ್ವರಂನಲ್ಲಿದ್ದ ಅರಣ್ಯ ಇಲಾಖೆಯಲ್ಲಿ ಶೇಖರಿಸಿಡಲಾಗಿತ್ತು. ಆಗಿನ ಮೈಸೂರು ಅರಸು ನಾಲ್ವಡಿ ಕೃಷ್ಣರಾಜರ ಕಣ್ಣಿಗೆ ಬಿದ್ದ ದಾಸ್ತಾನು, ಹೊಸ ಆಲೋಚನೆಯನ್ನು ಹುಟ್ಟಿಹಾಕಿತು. ಅವರ ಆಲೋಚನೆಗೆ ಚಾಲನೆ ನೀಡಿದ್ದು ಸರ್.ಎಂ ವಿಶ್ವೇಶ್ವರಯ್ಯ!

   ಇದರ ಪರಿಣಾಮವಾಗಿ ಶ್ರೀಗಂಧದ ಎಣ್ಣೆ ಬೆಂಗಳೂರಿನಲ್ಲಿ ಉತ್ಪಾದನೆಯಾಗತೊಡಗಿತು. ಶ್ರೀಗಂಧದ ಎಣ್ಣೆ ಕಾರ್ಖಾನೆ ನಂತರ ಮೈಸೂರಿಗೆ ವರ್ಗಾವಣೆಯಾಯಿತು. ಕೇವಲ ಶ್ರೀಗಂಧದ ಎಣ್ಣೆ ಉತ್ಪಾದನೆಯಾಗುತ್ತಿದ್ದ ಸಮಯದಲ್ಲಿ ಸಾಬೂನು ಉತ್ಪಾದನೆಯಾಗಲು ಆರಂಭವಾಗಿದ್ದರ ಹಿಂದೆಯೂ ಒಂದು ಪ್ರಸಂಗವಿದೆ :

ಅದೊಮ್ಮೆ ವಿದೇಶಿ ಗಣ್ಯರೊಬ್ಬರು ನಾಲ್ವಡಿಗಳಿಗೆ ಶ್ರೀಗಂಧದ  ಎಣ್ಣೆಯಿಂದ ತಯಾರಾದ ಸೋಪಿನ ಬಿಲ್ಲೆಗಳನ್ನು ಉಡುಗೊರೆಯಾಗಿ ನೀಡಿದರು. ಇದನ್ನು ನೋಡಿದ ನಾಲ್ವಡಿಗಳಿಗೆ ‘ನಾವೇ ಯಾಕೆ ಶ್ರೀಗಂಧದ ಸಾಬೂನುಗಳ ಉತ್ಪಾದನೆ ಮಾಡಬಾರದು?’ ಎನ್ನುವ ಯೋಚನೆ ತಲೆಗೆ ಬಂತು. ತಕ್ಷಣ ರಸಾಯನ ಶಾಸ್ತ್ರ ಅಧ್ಯಯನ ಮಾಡಿದ್ದ ಎಸ್.ಜಿ ಶಾಸ್ತ್ರಿಯವರನ್ನು ಸಾಬೂನು ತಯಾರಿಕಾ ತಂತ್ರಗಳನ್ನು ತಿಳಿದುಕೊಂಡು ಬರಲು ಇಂಗ್ಲೆಂಡಿಗೆ ಕಳುಹಿಸಿಕೊಡಲಾಯಿತು. ನಂತರ ಹುಟ್ಟಿಕೊಂಡಿದ್ದೇ ‘ಮೈಸೂರು ಸ್ಯಾಂಡಲ್ ಸೋಪ್’!

   ಅಂತಾರಾಷ್ಟ್ರೀಯ ಕಂಪನಿಗಳ ಪೈಪೋಟಿಯ ನಡುವೆಯೂ ಇವತ್ತಿಗೂ ಸಹ ‘ಮೈಸೂರು ಸ್ಯಾಂಡಲ್ ಸೋಪ್’ ಜಗತ್ತಿನಾದ್ಯಂತ ತನ್ನ ಮಾರುಕಟ್ಟೆ ಉಳಿಸಿಕೊಂಡಿದೆ. ಎಲ್ಲೆಡೆ ತನ್ನ ಘಮವನ್ನು ಪಸರಿಸುವುದರೊಂದಿಗೆ, ಕನ್ನಡ ನಾಡಿನ ಕೀರ್ತಿ ಪತಾಕೆಯನ್ನೂ ಹಾರಿಸುತ್ತಿದೆ.

Advertisements