yourstory_Empowering_Women

ಕರ್ನಾಟಕ ರಾಜ್ಯ ಹಲವು ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಹೆಜ್ಜೆಯನ್ನಿಡುವುದರೊಂದಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಸಮಾಜದ ಪ್ರತಿಯೊಂದು ವರ್ಗದವರನ್ನೂ ಪ್ರಗತಿಯ ಹಳಿಯಲ್ಲಿ ನಡೆಸುವಲ್ಲಿ ಕರ್ನಾಟಕ ಯಶಸ್ವಿಯಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ನಿಟ್ಟಿನಲ್ಲಿ ರಾಜ್ಯದ ಜನತೆಗೆ ಭರಪೂರ ಕೊಡುಗೆ ನೀಡಿದೆ, ನೀಡುತ್ತಿದೆ. ಇದೀಗ ಮಹಿಳಾ ಉದ್ಯಮಿಗಳ ಉತ್ತೇಜನಕ್ಕೆ ಸಿದ್ದರಾಮಯ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.

   ಕರ್ನಾಟಕ ರಾಜ್ಯವು ಕೈಗಾರಿಕಾ ಕ್ಷೇತ್ರದಲ್ಲೂ ಕ್ರಾಂತಿಕಾರಕ ಹೆಜ್ಜೆಯನ್ನಿಟ್ಟಿದೆ. ಐಟಿ ಕ್ಷೇತ್ರದಂತೆಯೇ ಕೈಗಾರಿಕೆಯೂ ಕೂಡ ಇಲ್ಲಿ ಕ್ಷಿಪ್ರಗತಿಯ ಬೆಳವಣಿಗೆ ಕಂಡಿದೆ. ಈ ಕ್ಷೇತ್ರದಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆ ನೀಡಲು ಇದೀಗ ಸಿದ್ದರಾಮಯ್ಯನವರು ಮುಂದಾಗಿದ್ದಾರೆ. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾಭಿವೃದ್ಧಿ ನಿಗಮದಿಂದ ಶೇ.5ರಷ್ಟು ನಿವೇಶನಗಳನ್ನು ಮಹಿಳಾ ಉದ್ಯಮಿಗಳಿಗೆ ಮೀಸಲಿಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

   ಕೈಗಾರಿಕಾ ವಲಯದಲ್ಲಿ ಮಹಿಳಾ ಉದ್ಯಮಿಗಳಿಗೆ ಸೂಕ್ತ ಸೌಲಭ್ಯ ದೊರೆಯುತ್ತಿಲ್ಲ, ಸೂಕ್ತ ವೇದಿಕೆ ದೊರೆಯುತ್ತಿಲ್ಲ ಎನ್ನುವಂತಹ ಮಾತುಗಳು ಆಗೀಗ ಕೇಳಿಬರುತ್ತಿದ್ದವು. ಅವನ್ನೆಲ್ಲ ಸರಿಮಾಡಲು ಸಿದ್ದರಾಮಯ್ಯನವರು ಮಹಿಳಾ ಉದ್ಯಮಿಗಳಿಗೆ ಸೌಲಭ್ಯ ಒದಗಿಸಲು ಮುಂದಾಗಿದ್ದಾರೆ. “ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮಹಿಳಾ ಉದ್ಯಮಿಗಳ ಪ್ರೋತ್ಸಾಹಕ್ಕೆ ಸೂಕ್ತ ಸೌಲಭ್ಯ ಒದಗಿಸಲಾಗುವುದು” ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. ಹುಬ್ಬಳ್ಳಿ ಧಾರವಾಡ ಮತ್ತು ಕನಕಪುರ ಬಳಿಯ ಹಾರೋಹಳ್ಳಿ ತಾಲೂಕಿನಲ್ಲಿ ಮಹಿಳೆಯರ ಉದ್ಯಮ ಸ್ಥಾಪಿಸಲು ಕೈಗಾರಿಕಾ ಪ್ರದೇಶವನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ 100 ಎಕರೆ ಪ್ರದೇಶವನ್ನು ಮೀಸಲಿಡಲಾಗಿದೆ. ಈ ಮೂಲಕ ಹಾರೋಹಳ್ಳಿಯಲ್ಲಿ ‘ಮಹಿಳಾ ಪಾರ್ಕ್’ ನಿರ್ಮಾಣವಾಗಲಿದೆ.

   “ಸಮಾನತೆ ಕೇವಲ ಸಿಗುವುದಷ್ಟೇ ಅಲ್ಲ, ಅದು ಹಕ್ಕುಗಳನ್ನು ರಕ್ಷಿಸುವಂತಿರಬೇಕು. ವಿಶ್ವದ ಅನೇಕ ಮಹಿಳೆಯರು ಸಮಾಜ, ಕುಟುಂಬದ ಅಡೆತಡೆ ಮೀರಿ ಸಾಧನೆ ಮಾಡಿದ್ದಾರೆ. ಅವರಿಗೆ ಲಿಂಗ ಸಮಾನತೆ ದೊರೆತರೆ ಮತ್ತಷ್ಟು ಸಾಧಿಸುತ್ತಾರೆ. ಕರ್ನಾಟಕ ರಾಜ್ಯ ಲಿಂಗ ಸಮಾನತೆ ಹೊಂದಿರುವ ರಾಜ್ಯಗಳ ಪೈಕಿ ಉತ್ತಮ ಸ್ಥಾನದಲ್ಲಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹಿಳೆಯರ ಶ್ರೇಯೋಭಿವೃದ್ಧಿಯೆಡೆಗಿನ ತಮ್ಮ ಕಳಕಳಿಯನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಸರ್ಕಾರದ ಇಂತಹ ನಡೆಗಳೇ ಕನ್ನಡಿಗರ ಕೀರ್ತಿಯನ್ನು ಇನ್ನಷ್ಟು ಎತ್ತರಿಸುತ್ತಿದೆ. ನಮ್ಮ ಸರ್ಕಾರ, ನಮ್ಮ ಹೆಮ್ಮೆ!

Advertisements