06bg_bgkpm_DEJA_07_2464503f

ಕನ್ನಡ ಸಾಹಿತ್ಯ ಲೋಕದ ಅಗ್ರಗಣ್ಯರಲ್ಲಿ ಒಬ್ಬರಾಗಿದ್ದ ನಾಡೋಜ ಡಾ.ದೇ.ಜವರೇಗೌಡರು ಇನ್ನಿಲ್ಲ! ಹೌದು, ಕುವೆಂಪು ಶಿಷ್ಯ ಪರಂಪರೆಯ ಕೊಂಡಿ ಎಂದೇ ಹೇಳಬಹುದಾದ ದೇಜಗೌ 30-05-16 (ಸೋಮವಾರ) ಸಂಜೆ ಇಹಲೋಕ ತ್ಯಜಿಸಿದ್ದಾರೆ. ಆ ಮೂಲಕ ಕನ್ನಡದ ಸಾಹಿತ್ಯಕ್ಕೆ ತುಂಬಲಾರದ ನಷ್ಟವುಂಟಾಗಿದೆ. ಸಾಹಿತ್ಯ ಕೃಷಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

   1918ರ ಜುಲೈ 8ರಂದು ಚನ್ನಪಟ್ಟಣದ ಚಕ್ಕರೆಯಲ್ಲಿ ದೇವೇಗೌಡ- ಚನ್ನಮ್ಮ ದಂಪತಿಗೆ ಜನಿಸಿದ ದೇಜಗೌ ಬಡತನದ ನಡುವೆಯೇ ವಿದ್ಯಾಭ್ಯಾಸ ನಡೆಸಿದರು. ರಾಷ್ಟ್ರಕವಿ ಕುವೆಂಪು ಅವರಿಂದ ಪ್ರಭಾವಿತರಾಗಿದ್ದ ಅವರು, ಮೈಸೂರಿನಲ್ಲಿ ಕನ್ನಡ ಎಂಎ ಪದವಿ ಪಡೆದರು. ವಿದ್ಯಾಭ್ಯಾಸದ ನಂತರ ಅನೇಕ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಹುದ್ದೆಗಳನ್ನು ನಿರ್ವಹಿಸಿದರು. 1969ರಲ್ಲಿ ಮೈಸೂರು ವಿವಿ ಕುಲಪತಿಯಾಗಿ ಕನ್ನಡಾಂಬೆಗೆ ಅವಿಸ್ಮರಣೀಯ ಸೇವೆ ಸಲ್ಲಿಸಿದರು.

   ಕನ್ನಡದ ಹಲವಾರು ಸಾಹಿತ್ಯ ಪ್ರಕಾರಗಳಲ್ಲಿ ದೇಜಗೌ ಅಚ್ಚಳಿಯದ ಕೃತಿಯನ್ನುಳಿಸಿ ಹೋಗಿದ್ದಾರೆ. ಜಾನಪದ, ಗ್ರಂಥ ಸಂಪಾದನೆ, ಸಾಹಿತ್ಯ ವಿಮರ್ಶೆ, ಭಾಷಾಂತರ, ಜೀವನಚರಿತ್ರೆ, ಪ್ರವಾಸ ಸಾಹಿತ್ಯ ಸೇರಿದಂತೆ ಅವರ ಸಾಹಿತ್ಯ ಕೃಷಿ ವ್ಯಾಪಕ ವಿಸ್ತಾರ ಹೊಂದಿದೆ. ನಯನಸೇನನ ಧರ್ಮಾಮೃತ ಸಂಗ್ರಹ, ಲಕ್ಷ್ಮೀಶನ ಜೈಮಿನಿ ಭಾರತ, ಕನಕದಾಸರ ನಳಚರಿತ್ರೆ, ಜಾನಪದ ಅಧ್ಯಯನ, ಜಾನಪದ ಸೌಂದರ್ಯ, ಹಮ್ಮು ಮತ್ತು ಬಿಮ್ಮು, ನೆನಪು ಕಹಿಯಲ್ಲ, ಅನಾ ಕರೆನಿನಾ ಮೊದಲಾದವು ಅವರ ಬರವಣಿಗೆಯ ಕೆಲ ಉದಾಹರಣೆಗಳಷ್ಟೆ.

   ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ, ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಹೀಗೇ ಸಾಗುತ್ತದೆ ದೇಜಗೌ ಅವರಿಗೆ ಸಂದ ಪ್ರಶಸ್ತಿ-ಪುರಸ್ಕಾರಗಳ ಪಟ್ಟಿ. 1970ರಲ್ಲಿ ಬೆಂಗಳೂರಿನಲ್ಲಿ ನಡೆದ 47ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 2008ರ ಕರ್ನಾಟಕ ರತ್ನ ಪ್ರಶಸ್ತಿಯು ದೆಜಗೌ ಅವರಿಗೆ ಒಲಿದು ಬಂದಿದೆ.

   ನಿರೀಶ್ವರವಾದಿಯಾಗಿದ್ದು, ಹೊಗಳಿಕೆಗೆ ಉಬ್ಬದೇ, ತೆಗಳಿಕೆಗೆ ಕುಗ್ಗದೇ ತಮ್ಮ ವಿಚಾರಧಾರೆಗಳನ್ನು ಸ್ಪಷ್ಟವಾಗಿ ದಾಖಲಿಸಿದವರು ದೇ.ಜವರೇಗೌಡರು. ಕುವೆಂಪುರವರನ್ನು ತಮ್ಮ ಗುರುವೆಂದು ಸ್ವೀಕರಿಸಿದ್ದ ಅವರ ಹಾಗೂ ಕುವೆಂಪುರವರ ಬಾಂಧವ್ಯ ವಿವರಣಾತೀತವಾದದ್ದು. ಏಕೆಂದರೆ ಕುವೆಂಪುರವರೇ ಒಂದು ಕಡೆ ‘ದೇಜಗೌ ತಮ್ಮ ಜೀವನದ ಮಾರ್ಗದರ್ಶಕರು’ ಎಂದು ಬರೆದುಕೊಂಡಿದ್ದಾರೆ. ಇದು ಕುವೆಂಪು ಅವರಿಗೆ ತಮ್ಮ ಶಿಷ್ಯನೆಡೆಗಿದ್ದ ಅಭಿಮಾನವನ್ನು ತೋರಿಸುತ್ತದೆ. ಇಂತಹ ಮೇರು ವ್ಯಕ್ತಿತ್ವದ ದೇಜಗೌ ಇನ್ನು ನೆನಪು ಮಾತ್ರ. ಅವರ ಭೌತಿಕ ಅಸ್ಥಿತ್ವ ಇನ್ನಿಲ್ಲದಿದ್ದರೂ ಅವರ ಕೃತಿಗಳು ಎಂದಿಗೂ ಅಜರಾಮರ.

Advertisements