Search

Namma Karnataka

ಯಕ್ಷಗಾನ- ಇದು ಕಲೆಯಲ್ಲ, ನಾಡಿನ ಪರಂಪರೆ

Yakshagana.pngಯಕ್ಷಗಾನ ಎಂಬುದು ನೃತ್ಯ, ಹಾಡುಗಾರಿಕೆ, ವೇಷಭೂಷಣಗಳಲ್ಲಿ ಒಂದು ವಿಭಿನ್ನ ಕಲೆಯಾಗಿದೆ. ಇದು ಕರ್ನಾಟಕದ ಸಾಂಪ್ರದಾಯಿಕ ಕಲೆಗಳಲ್ಲಿ ಅತ್ಯಂತ ಮಹತ್ವದ ಪ್ರಕಾರವಾಗಿದೆ. ಉತ್ತರಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕಾಸರಗೋಡು ಈ ಭಾಗಗಳಲ್ಲಿ ಹೆಸರುವಾಸಿಯಾದ ಕಲಾ ಪ್ರಕಾರವಾಗಿದೆ.
ಯಕ್ಷಗಾನದಲ್ಲಿ ಹಲವಾರು ಪ್ರಮುಖ ಅಂಶಗಳಿವೆ ಜೊತೆಗೆ ಭಿನ್ನ ಪ್ರಕಾರಗಳು ಕೂಡ ಇವೆ. ಐತಿಹಾಸಿಕ ಪ್ರಸಂಗಗಳು, ಸಾಮಾಜಿಕ ಪ್ರಸಂಗಗಳು ಹಾಗೂ ಇತ್ತೀಚಿನ ಆದುನಿಕ ಪ್ರಸಂಗಗಳನ್ನೂ ಕೂಡ ನಾವು ಯಕ್ಷಗಾನದಲ್ಲಿ ಕಾಣಬಹುದು. ಹಾಡು, ನೃತ್ಯ ಮತ್ತು ಸಂಭಾಷಣೆಗೆ ಪ್ರಾಮುಖ್ಯತೆಯಿರುವ ಈ ಕಲೆಯಲ್ಲಿ ಅಭಿನಯವೂ ಕೂಡ ಅಷ್ಟೆ ಪ್ರಮುಖ ಪಾತ್ರವನ್ನು ಪಡೆದಿದೆ.
ಯಕ್ಷಗಾನದಲ್ಲಿ ಯಾವುದಾದರೂ ಒಂದು ಕಥೆಯನ್ನು ಹಾಡಿನ ಮೂಲಕ ಪ್ರಸ್ತುತಪಡಿಸಲಾಗುತ್ತದೆ. ಅದಕ್ಕೆ ತಕ್ಕಂತೆ ನೃತ್ಯ ಮತ್ತು ಸಂಭಾಷಣೆಯನ್ನು ಪಾತ್ರಧಾರಿಯಾದವನು ವೀಕ್ಷಕರಿಗೆ ಅರ್ಥವಾಗುವಂತೆ ಪ್ರಸ್ತುತಪಡಿಸಬೇಕಾಗುತ್ತದೆ. ಪದ್ಯವನ್ನು ಹಾಡುವವರಿಗೆ ಭಾಗವತ ಎಂದು ಕರೆಯುತ್ತಾರೆ. ಈತನೇ ಇಡೀ ಕಥೆಯನ್ನು ಎಲ್ಲಿಯೂ ದಾರಿ ತಪ್ಪದಂತೆ ಬುಡದಿಂದ ಕೊನೆಯವರೆಗೂ ಕೊಂಡೊಯ್ಯುತ್ತಾನೆ. ರಾಗ ಮತ್ತು ನಿರರ್ಗಳವಾಗಿ ಹಾಡುವ ಕಲೆ ಭಾಗವತನಾದವನಿಗೆ ಅತಿ ಮುಖ್ಯವಾಗಿರುತ್ತದೆ.
ಇನ್ನು ಬಣ್ಣ ಬಣ್ಣದ ವೇಷಭೂಷಣಗಳನ್ನು ಧರಿಸಿಕೊಂಡು, ನೃತ್ಯವನ್ನು ಮಾಡುತ್ತಾ ಜನರನ್ನು ರಂಜಿಸುವವರಿಗೆ ಪಾತ್ರಧಾರಿಗಳು ಎಂದು ಕರೆಯುತ್ತಾರೆ. ಸಂದರ್ಭ ಮತ್ತು ಪಾತ್ರಕ್ಕೆ ತಕ್ಕಂತೆ ಸ್ವರ ಏರಿಳಿತದಿಂದ ಮಾತನಾಡುತ್ತಾ, ಆ ಪಾತ್ರಕ್ಕೆ ಜೀವತುಂಬುವ ಕಲೆ ಪಾತ್ರಧಾರಿಯಾದವನಿಗೆ ಅವಶ್ಯವಾಗಿ ತಿಳಿದಿರಬೇಕಾಗಿರುತ್ತದೆ. ಕೆಲವು ಪಾತ್ರಗಳು ವೀಕ್ಷಿಕರ ಮನಸ್ಸಿನಲ್ಲಿ ಅದೆಷ್ಟರ ಮಟ್ಟಿಗೆ ಸಂಚಲನವನ್ನುಂಟು ಮಾಡುತ್ತದೆ ಎಂದರೆ ಸಾಮಾನ್ಯವಾಗಿ ರಾವಣನನ್ನು ದುಷ್ಟ ಎಂದು ಭಾವಿಸಿದವರು ಕೂಡ ಪಾತ್ರಧಾರಿಯ ಅಭಿನಯಕ್ಕೆ ಮನಸೋತು ಆತನ ಪಾತ್ರವನ್ನು ಪ್ರೀತಿಸಲು ಪ್ರಾರಂಭಿಸುವಂತಾಗುತ್ತದೆ.
ಇನ್ನುಳಿದಂತೆ ಯಕ್ಷಗಾನದಲ್ಲಿ ಮದ್ದಲೆ, ಚಂಡೆ, ತಾಳ, ಜಾಗಟೆ ಮುಂತಾದ ಸಂಗೀತ ಸಾಮಾಗ್ರಿಗಳನ್ನು ಬಳಸಲಾಗುತ್ತದೆ. ಭಾಗವತರ ರಾಗಕ್ಕೆ ತಕ್ಕಂತೆ ಈ ಹಿಮ್ಮೇಳಗಳು ಹೊಮ್ಮುವ ಮೂಲಕ, ವಿಚಾರಗಳನ್ನು ಮನ ಮುಟ್ಟಿಸುವುದರ ಜೊತೆಗೆ ವಿಷಯಕ್ಕೆ ಜೀವ ತುಂಬುವ ಪ್ರಯತ್ನವನ್ನು ಮಾಡುತ್ತವೆ. ಹಾಡಿನ ಜೊತೆಗೆ ಈ ಹಿಮ್ಮೇಳದ ಶಬ್ದಗಳು ಕೇಳುವ ಕಿವಿಗೆ ಮುದವನ್ನು ನೀಡುವ ಜೊತೆಗೆ ಪ್ರೇಕ್ಷಕರು ಸದಾ ಎಚ್ಚರಗೊಂಡಿರುವಂತೆ ಪ್ರೇರೇಪಿಸುತ್ತದೆ.
ಯಕ್ಷಗಾನವೆಂಬ ಕಲಾ ಪ್ರಕಾರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸುಮಾರು 500 ವರ್ಷಗಳ ಹಿಂದೆ ಈ ಕಲೆ ಒಂದು ಯೋಜಿತ ರೂಪವನ್ನು ಪಡೆದುಕೊಂಡಿತು ಎಂದು ಇತಿಹಾಸಕಾರರು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಕಲೆ ಸೂಕ್ತ ಪ್ರೋತ್ಸಾಹವಿಲ್ಲದೆ ಸ್ವಲ್ಪ ಮಟ್ಟಿಗೆ ಸೊರಗಿ ಹೋಗಿದೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಕೋಟಾ ಶಿವರಾಮ ಕಾರಂತರು ಯಕ್ಷಗಾನವನ್ನು ಕುರಿತು ‘ಯಕ್ಷಗಾನ ಬಯಲಾಟ’ ಎಂಬ ಕೃತಿಯನ್ನು ರಚಿಸಿದ್ದಾರೆ, ಅದರಲ್ಲಿ ಈ ಕಲಾ ಪ್ರಕಾರದ ಬಗ್ಗೆ ಸಮುದ್ರದಷ್ಟು ಮಾಹಿತಿ ಲಭ್ಯವಿದೆ.
ಇತ್ತೀಚಿನ ವರ್ಷಗಳಲ್ಲಿ ಯಕ್ಷಗಾನದ ಮೂಲಕ ಖ್ಯಾತಿ ಗಳಿಸಿದ ಹಲವಾರು ಕಲಾವಿದರಿದ್ದಾರೆ. ಅವರುಗಳಲ್ಲಿ ಪ್ರಮುಖರಾದವರೆಂದರೆ-
ಕೆರೆಮನೆ ಮಹಾಬಲ ಹೆಗಡೆ, ವಾಸುದೇವ ಸಾಮಗ, ಕೆರೆಮನೆ ಶಂಭು ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಬಳ್ಕೂರು ಕೃಷ್ಣಯಾಜಿ, ಸುಬ್ರಮಣ್ಯ ಹೆಗಡೆ ಚಿಟ್ಟಾಣಿ, ಮಂಕಿ ಈಶ್ವರ ನಾಯ್ಕ್, ತೀರ್ಥಹಳ್ಳಿ ಗೋಪಾಲಾಚಾರಿ, ಖ್ಯಾತ ಭಾಗವತರೆಂದರೆ ಸುಬ್ರಮಣ್ಯ ಧಾರೇಶ್ವರ, ಕೊಳಗಿ ಕೇಶವ ಹೆಗಡೆ, ಹೆರಂಜಾಲು ಗೋಪಾಲ ಗಾಣಿಗ, ಕಾಳಿಂಗ ನಾವುಡ, ರಾಘವೇಂದ್ರ ಮಯ್ಯ ಮುಂತಾದವರು.
ಈ ರೀತಿಯ ಹಲವಾರು ಕಲಾವಿದರÀ ಗುಂಪಿಗೆ ಯಕ್ಷಗಾನ ಮೇಳ ಎಂದು ಕರೆಯುತ್ತಾರೆ. ಈ ಮೇಳಗಳು ಕಲಾವಿದರನ್ನು ಒಗ್ಗೂಡಿಸಿ, ಒಂದು ಸಂಘಟಿತ ಗುಂಪಿನ ಮೂಲಕ ಕಾರ್ಯಕ್ರಮವನ್ನು ನಡೆಸಿಕೊಡುತ್ತವೆ. ಇವುಗಳಲ್ಲಿ ಹಲವಾರು ಪ್ರಮುಖ ಮೇಳಗಳಿದ್ದು, ಸಾಕಷ್ಟು ಗುಣಮಟ್ಟದ ಕಲಾವಿದರಿಗೆ ಹೆಸರುವಾಸಿಯಾಗಿವೆ.
ಒಟ್ಟಿನಲ್ಲಿ ನೂರಾರು ವರ್ಷಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ ಕಲಾ ಪ್ರಕಾರವೊಂದು ಇಂದು ಅಗತ್ಯ ಪ್ರೋತ್ಸಾಹವಿಲ್ಲದೆ ಕುಗ್ಗಿಹೋಗಿದೆ. ಹಾಗಾಗಿ ಇಂತಹಾ ಒಂದು ಐತಿಹಾಸಿಕ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡಿಗರು ಒಂದಾಗಬೇಕಾದ ಅನಿವಾರ್ಯತೆಯಿದೆ.
ಅಭಿಮಾನಿಗಳೇ ಕಲಾವಿದನ ನಿಜವಾದ ಆಸ್ತಿ ಎಂಬುದು ಸಾರ್ವಕಾಲಿಕ ಸತ್ಯ.

When Namma Athletes received a surprise Christmas special!

when-namma-athletes-received-a-surprise-christmas-special
Karnataka sportspersons participating in the Tokyo 2020 Olympics have a Christmas special delivered by Namma Sarkara!  In a surprise move, the Chief Minister has announced a five-fold increase in award amounts to Olympic Medalists.
Gold medalists will now be awarded with Rs. 5 crore, while silver & bronze medalists will receive Rs. 3 crore and Rs. 1 crore respectively. While the Karnataka Olympic Association had requested the Government to double the award, the CM’s announcement took everyone by surprise & has received ample praise from the sporting community.
Namma Sarkara is known to have allotted Rs. 3 crore to conduct the upcoming State Games in Hubballi & Dharwad. Promising more funds for sports in the upcoming budget, the CM also said medal winners at the 2015 National Games in Kerala would be rewarded soon.
Financial support and incentives are crucial to encourage our hardworking and oft under-recognised athletes across the state. Let’s hope the government stays committed to developing Karnataka’s thriving sporting ecosystem.

18 ವರ್ಷದ ಬಳಿಕ ಟೀಮ್ ಇಂಡಿಯಾದಲ್ಲಿ ಸದ್ದು ಮಾಡಿದ ಕನ್ನಡಿಗರು

unnamed

ಆಂಗ್ಲರ ವಿರುದ್ಧ ನಡೆಯುತ್ತಿರುವ ಅಂತಿಮ ಮತ್ತು ಐದನೇ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗರು ಸದ್ದು ಮಾಡುತ್ತಿದ್ದಾರೆ. ಪಂದ್ಯ ಆರಂಭಿಸಿದ ಕನ್ನಡಿಗ ಕೆ.ಎಲ್. ರಾಹುಲ್ ದ್ವಿಶತಕದ ಅಂಚಿನಲ್ಲಿ ಎಡವಿದರೆ, ಮತ್ತೊಬ್ಬ ಕನ್ನಡಿಗ ಕರುಣ್ ನಾಯರ್ ತ್ರಿಶತಕ ಸಾಧನೆ ಮಾಡಿ ನಾಡಿನ ಕೀರ್ತಿಯನ್ನು ಪಸರಿಸಿದ್ದಾರೆ.

ಈ ಮೂಲಕ ಟೀಮ್ ಇಂಡಿಯಾದಲ್ಲಿ ಕನ್ನಡಿಗರು 18 ವರ್ಷದ ಬಳಿಕ ಮತ್ತೆ ಜೊತೆಯಾಟವಾಗಿದ್ದಾರೆ. ಮತ್ತೆ ತಮ್ಮ ಶಕ್ತಿ ಸಾಮಾರ್ಥ್ಯವನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ತಂಡವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ.

ಚೆನ್ನೈನ ಚಿಪಾಕ್ ನಲ್ಲಿರುವ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ರಾಹುಲ್ ಮತ್ತು ಕರುಣ್ ನಾಯರ್ ಜೊತೆಯಾಗಿ ಮಿಂಚು ಹರಿಸಿದ್ದು, ಈ ಇಬ್ಬರು ಆಟಗಾರರೇ ಒಟ್ಟಾಗಿ 500ಕ್ಕೂ ಹೆಚ್ಚು ರನ್ ಬಾರಿಸಿದ್ದಾರೆ. ಇಂಗ್ಲೆಂಡ್ ಬೌಲರ್ ಗಳನ್ನು ಬಹುವಾಗಿ ಕಾಡಿದ್ದಾರೆ. ಚೆಂಡನ್ನು ಮೈದಾನದ ಮೂಲೆ ಮೂಲೆಗೂ ಅಟ್ಟಿದ್ದಾರೆ.

ಕರುಣ್ ನಾಯರ್ ತಮ್ಮ ಮೂರನೇ ಟಸ್ಟ್ ಪಂದ್ಯದಲ್ಲೇ ಚೊಚ್ಚಲ ತ್ರಿಶತಕ ಸಾಧನೆ ಮಾಡಿದ್ದು, ಕನ್ನಡಿಗರ ಮಟ್ಟಿಗೆ ಇದು ಮೊದಲನೇಯ ತ್ರಿಶತಕವಾಗಿದೆ. ನಾಯರ್ ಒಟ್ಟು 381 ಎಸೆತಗಳಲ್ಲಿ 303 ರನ್ ಸಿಡಿಸುವ ಮೂಲಕ ಈ ಸಾಧನೆ ಗೈದಿದ್ದಾರೆ.

ಟೀಮ್ ಇಂಡಿಯಾದ ಗೋಡೆ ಖ್ಯಾತಿಯ ಕನ್ನಡಿಗ ರಾಹುಲ್ ದ್ರಾವಿಡ್ 2004ರಲ್ಲಿ ಪಾಕಿಸ್ತಾನ ವಿರುದ್ಧ ಗಳಿಸಿದ್ದ 270 ರನ್ ಗಳು ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು.

ಇನ್ನು ಕರ್ನಾಟಕದ ಹುಡುಗ ಕೆ.ಎಲ್. ರಾಹುಲ್ ಒಂದೇ ಒಂದು ರನ್‌ ಅಂತರದಿಂದ ತಮ್ಮ ಟೆಸ್ಟ್ ಜೀವನದ ಮೊದಲ ದ್ವಿಶತಕ ದಾಖಲಿಸುವ ಅವಕಾಶದಿಂದ ವಂಚಿತರಾದರು, ಆದರೆ ಆ ನೋವನ್ನು ಕರುಣ್ ಮರೆಸಿದರು.

ರಾಹುಲ್ಕರುಣ್ ದಾಖಲೆಯ ಜೊತೆಯಾಟ

ಈ ಜೋಡಿಯ  ಜೊತೆಯಾಟವು  ದಾಖಲೆಯೊಂದಕ್ಕೆ ಕಾರಣವಾಯಿತು. 18 ವರ್ಷಗಳ ನಂತರ ಕರ್ನಾಟಕದ ಬ್ಯಾಟ್ಸ್‌ಮನ್‌ಗಳ ಜೋಡಿಯು ಭಾರತ ತಂಡಕ್ಕಾಗಿ ಟೆಸ್ಟ್‌ನಲ್ಲಿ  ಒಟ್ಟಾಗಿ ಬ್ಯಾಟ್ ಬೀಸಿದ್ದು ವಿಶೇಷವಾಗಿತ್ತು.

1999ರಲ್ಲಿ  ನ್ಯೂಜಿಲೆಂಡ್ ಎದುರು ಕಾನ್ಪುರದಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ರಾಹುಲ್ ದ್ರಾವಿಡ್ ಮತ್ತು ವಿಜಯ್ ಭಾರದ್ವಾಜ್ ಅವರು ಜೊತೆಯಾಟವಾಡಿದ್ದರು. ಇದಾದ ಬಳಿಕ ಕನ್ನಡಿಗರಿಬ್ಬರು ಜೊತೆಯಾಗಿ ಇನ್ನಿಂಗ್ಸ್ ಆಡಲು 18 ವರ್ಷ ಕಾಯಬೇಕಿತ್ತು.

ಇಂಗ್ಲೆಂಡ್ ವಿರುದ್ಧ ಬ್ಯಾಟಿಂಗ್ ಆರಂಭಿಸಿದ್ದ ರಾಹುಲ್ ಮತ್ತು ಪಾರ್ಥಿವ್ ಜೋಡಿಯು 152 ರನ್ ಕಲೆ ಹಾಕಿತು. ಪಾರ್ಥಿವ್ ನಂತರ ಚೇತೇಶ್ವರ ಪೂಜಾರ್ ಮತ್ತು ವಿರಾಟ್ ಕೊಹ್ಲಿ ಹೆಚ್ಚು ಹೊತ್ತು ಕ್ರಿಸ್ ಕಾಯ್ದುಕೊಳ್ಳಲಿಲ್ಲ.

ಈ ಸಂದರ್ಭದಲ್ಲಿ ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ರಾಹುಲ್ ಅವರೊಂದಿಗೆ ಕರ್ನಾಟಕದ ಇನ್ನೊಬ್ಬ ಆಟಗಾರ ಕರುಣ್ ನಾಯರ್  ಜೊತೆಯಾದರು. ಇಬ್ಬರು ಸ್ನೇಹಿತರು ರನ್ ಹೊಳೆ ಹರಿಸಿದರು.

ಚೊಚ್ಚಲ ತ್ರಿಶತಕ ದಾಖಲಿಸಿದ ಕರುಣ್ ನಾಯರ್ , ಟೆಸ್ಟ್ ಪಂದ್ಯವೊಂದರಲ್ಲಿ ತ್ರಿಶತಕ ದಾಖಲಿಸಿದ ಎರಡನೇ ಆಟಗಾರ ಎಂಬ ಕ್ರೀರ್ತಿಗೆ ಪಾತ್ರರಾದರು. ಈ ಹಿಂದೆ ಸ್ಪೋಟಕ ಬ್ಯಾಟ್ಸ್ಮನ್ ವಿರೇಂದ್ರ ಸೆಹ್ವಾಗ್ ಎರಡು ಬಾರಿ ಟೀಮ್ ಇಂಡಿಯಾ ಪರ ತ್ರಿಶತಕವನ್ನು ದಾಖಲಿಸಿದ್ದರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕವನ್ನೇ ತ್ರಿಶತಕವಾಗಿ ಪರಿವರ್ತಿಸಿದ ವಿಶ್ವದ ಮೂರನೇ ಬ್ಯಾಟ್ಸ್‌ಮನ್‌ ಎನ್ನುವ ದಾಖಲೆ ಸಹ ಕರುಣ್‌ ಹೆಸರಲ್ಲಿ ದಾಖಲಾಯಿತು.

ಪ್ರಾಣಾಪಾಯದಿಂದ ಪಾರಾಗಿದ್ದ ಕರುಣ್:

ಇದೇ ವರ್ಷದ ಜುಲೈನಲ್ಲಿ ತಿರುವಾಂಕೂರ್‌ನ ಪತ್ತನ್‌ತ್ತಿಟ್ಟ್‌ ಎನ್ನುವ ಪ್ರದೇಶದ ಬಳಿ ಇರುವ ಪಾರ್ಥಸಾರಥಿ ದೇವಾಲಯದಲ್ಲಿ ನಡೆದ ಉತ್ಸವದಲ್ಲಿ ಪಾಲ್ಗೊಳ್ಳಲು ಕರುಣ್‌ ಕೇರಳಕ್ಕೆ ತೆರಳಿದ್ದರು.

ಈ ಸಂದರ್ಭದಲ್ಲಿ ಪಂಪಾನದಿಯ ಮೂಲಕ ಬರುವಾಗ  ದೋಣಿ ಮಗುಚಿ  ಬಿದ್ದಿತ್ತು. ಆಗ ಕರುಣ್‌ ಪ್ರಾಣಾಪಾಯದಿಂದ ಪಾರಾಗಿದ್ದರು.

‘ಹೇಗೆ ಈಜಬೇಕು ಎಂಬುದು ಗೊತ್ತಿರಲಿಲ್ಲ. ಅದೃಷ್ಟವಶಾತ್ ಅಲ್ಲಿದ್ದ ಸ್ಥಳಿಯರು ನನ್ನ ಕಾಪಾಡಿದರು’ ಎಂದು ಕರುಣ್‌ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು.

ಒಟ್ಟಿನಲ್ಲಿ ಕನ್ನಡಿಗರು ನಮ್ಮ ಹೆಮ್ಮೆಯ ಸಂಕೇತ.

ಕನ್ನಡ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಗುಬ್ಬಿ ವೀರಣ್ಣನವರ ಹೆಜ್ಜೆ ಗುರುತು

 

gubbi-veerannaಕನ್ನಡ ಚಿತ್ರರಂಗಕ್ಕೆ ಭದ್ರ ಅಡಿಪಾಯ ಹಾಕಿದ್ದು ಗುಬ್ಬಿ ವೀರಣ್ಣ ಎಂದರೇ ಯಾರಿಗೆ ಗೊತ್ತಿಲ್ಲ, ರಂಗಭೂಮಿಯ ಜೊತೆಯಲ್ಲೇ ಚಿತ್ರರಂಗದ ಮೂಲಕವೇ ತಮ್ಮನ್ನು ಗುರುತಿಸಿಕೊಂಡಿದ್ದ ಗುಬ್ಬಿಯ ವೀರಣ್ಣ, ತಮ್ಮ ಗರಡಿಯಲ್ಲಿ ನೂರಾರು ಮಂದಿ ನಟ-ನಟಿಯರನ್ನು ಪಳಗಿಸಿ ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿದವರು. ಇಂದಿನ ದಿನದಲ್ಲಿ ಕನ್ನಡ ರಂಗಭೂಮಿ ಮತ್ತು ಚಿತ್ರರಂಗ ಉತ್ತಮ ಹಂತದಲ್ಲಿದೆ ಎಂದರೆ ಅದಕ್ಕೆ ಕಾರಣ ವೀರಣ್ಣ. ಆದರೆ ಅವರ ಕೊಡುಗೆ ಬಗ್ಗೆ, ಚಿತ್ರರಂಗ ಮತ್ತು ನಾಟಕದಲ್ಲಿ ಅವರ ಪ್ರಯತ್ನಗಳ ಬಗ್ಗೆ ಇಂದು ಮಾತನಾಡುವವರೆ ಇಲ್ಲದಂತಾಗಿದೆ.

ಕನ್ನಡದಲ್ಲಿ ವಾಕ್ಚಿತ್ರಗಳ ಆರಂಭದ ದಿನಗಳಲ್ಲಿ ಗುಬ್ಬಿ ವೀರಣ್ಣರವರು ಚಿತ್ರಗಳ ನಿರ್ಮಾಣದ ಸಾಹಸಕ್ಕೆ ಕೈ ಹಾಕಿದ ಕಾರಣಕ್ಕೆ ಇಂದು ಕನ್ನಡ ಚಿತ್ರರಂಗ ಸುವರ್ಣಯುಗದಲ್ಲಿದೆ. ಕನ್ನಡದ ಮೂರನೇ ವಾಕ್ಚಿತ್ರವಾಗಿ ತಮ್ಮ ನಾಟಕವಾದ ಸದಾರಮೆಯನ್ನು ತೆರೆಗೆ ತಂದ ವೀರಣ್ಣ ನವರು ರಂಗಭೂಮಿ ಮತ್ತು ಸಿನಿಮಾ ಎರಡನ್ನು ಒಂದುಗೂಡಿಸುವ ಪ್ರಯತ್ನ ಮಾಡಿದರು. ನಂತರದ ದಿನಗಳಲ್ಲಿ ಅವರ ಈ ಪ್ರಯತ್ನದಿಂದ ಹಲವರು ಸ್ಫೂರ್ತಿ ಪಡೆದು ನಾಟಕಗಳನ್ನು ಬೆಳ್ಳಿತೆರೆಗೆ ತರಲು ಮುಂದಾದರು ಎಂದರೆ ತಪ್ಪಾಗುವುದಿಲ್ಲ.

ಸಿನಿಮಾ ನಿರ್ಮಾಣ ಮಾತ್ರವಲ್ಲದೇ ಚಿತ್ರ ಬಿಡುಗಡೆಗೆ ವೇದಿಕೆ ಕಲ್ಪಿಸುವ ಸಲುವಾಗಿ ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿ ಪ್ರಮುಖ ಚಿತ್ರಮಂದಿರವಾದ ಸಾಗರ್ ಥಿಯೇಟರ್ ಕಟ್ಟುವ ಮೂಲಕ ಕನ್ನಡ ವಾಕ್ಚಿತ್ರಗಳ ಬಿಡುಗಡೆಗೆ ಅವಕಾಶ ಕಲ್ಪಿಸಿದವವರು ಗುಬ್ಬಿಯವರು. ಚಿತ್ರ ಮಂದಿರದ ನಿರ್ಮಾಣದ ಜೊತೆಯಲ್ಲೇ ತಮ್ಮ ಗುಬ್ಬಿ ನಾಟಕ ಕಂಪನಿಯಲ್ಲಿ ಸದ್ದು ಮಾಡುತ್ತಿದ್ದ ಸುಭದ್ರ ನಾಟಕವನ್ನು ತೆರೆಗೆ ಪರಿಚಯಿಸಿದರು. ಅದ್ದೂರಿ ನಿರ್ಮಾಣ ವೆಚ್ಚದ ಆ ಚಿತ್ರದ ಬಜೆಟ್ ಆ ಕಾಲಕ್ಕೆ ಲಕ್ಷ ತಲುಪಿತ್ತು ಎನ್ನಲಾಗಿದೆ.

ಇದಾದ ನಂತರ ಮತ್ತೊಂದು ಹಿಟ್ ನಾಟಕ ಕೊಟ್ಟ ಗುಬ್ಬಿಯವರು ಚಿತ್ರ ನಿರ್ಮಿಸುವ ಭರದಲ್ಲಿ ನಾಟಕವನ್ನು ಮರೆಯಲಿಲ್ಲ, ಉತ್ತರ ಭಾರತದ ಸ್ಥಿತಿಗತಿಯನ್ನು ರಾಜ್ಯದವರಿಗೆ ತಲುಪಿಸಲು ‘ಜೀವನ’ ಎಂಬ ನಾಟಕವನ್ನು ನಿರ್ಮಾಣ ಮಾಡಿದರು. ಇದರ ಬೆನ್ನಹಿಂದೆಯೇ ಹೇಮ ರೆಡ್ಡಿ ಮಲ್ಲಮ್ಮ ನಾಟಕವನ್ನು ನಿರ್ಮಿಸಿದರು. ಈ ನಾಟಕ ಸಹ ಜನ ಸಾಮಾನ್ಯರನ್ನು ತಲುಪುವಲ್ಲಿ ಯಶಸ್ವಿಯಾಯಿತು.

ಅನೇಕ ಪ್ರಯೋಗಳ ನಂತರ ಲಾಭ ನಷ್ಟಗಳನ್ನು ಕಂಡ ಗುಬ್ಬಿ ವೀರಣ್ಣರವರು, 1953ರಲ್ಲಿ ಗುಬ್ಬಿ ಕರ್ನಾಟಕ ಫಿಲಂಸ್ ಸಂಸ್ಥೆಯನ್ನು ಕಟ್ಟಿದರು. ಈ ಸಂಸ್ಥೆ ಅಡಿಯಲ್ಲಿ ಗುಣಸಾಗರಿ ಚಿತ್ರವನ್ನು ನಿರ್ಮಿಸಿದರು. ಆದರೆ ಈ ಚಿತ್ರ ಕನ್ನಡದಲ್ಲಿ ಯಶಸ್ವಿಯಾದರೆ ತಮಿಳಿನಲ್ಲಿ ಸೋಲು ಕಂಡಿತ್ತು.

ಅದರೆ ಈ ಸೋಲಿನಿಂದ ಧೃತಿಗೇಡದ ವೀರಣ್ಣನವರು ಕನ್ನಡದ ಹೆಮ್ಮೆಯ ಚಿತ್ರ ಬೇಡರ ಕಣ್ಣಪ್ಪ ಚಿತ್ರವನ್ನು ಕನ್ನಡಿಗರಿಗಾಗಿ ನೀಡಿದರು. ಈ ಚಿತ್ರ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದಲ್ಲದೇ, ಕನ್ನಡಕ್ಕೂ ಹಿರಿಮೆಯನ್ನು ನೀಡಿತು.

ಶಾಲೆಯ ಮಟ್ಟಿಲು ತುಳಿಯದ ವೀರಣ್ಣ ನೂರಾರು ಮಂದಿಗೆ ನಟನೆಯ ಪಾಠ ಕೇಳಿಕೊಟ್ಟವರು. ಕನ್ನಡದ ರಂಗಭೂಮಿ ಮತ್ತು ಬೆಳ್ಳಿತೆರೆಗೆ ತಮ್ಮದೇ ಆದ ವಿಶಿಷ್ಠ ಕೊಡುಗೆಯನ್ನು ನೀಡಿದರವರು. ಸೋಲನ್ನು ಗೆಲುವಿಗೆ ಸಮಾನಾಗಿ ಸ್ವೀಕರಿಸಿ ತಮ್ಮದೇ ಇತಿಹಾಸವೊಂದನ್ನು ಬಿಟ್ಟು ಹೋದವವರು.

ಗುಬ್ಬಿ ವೀರಣ್ಣ ಅವರಂತಹ ಮಹಾನ್ ನಿರ್ದೇಶಕ, ನಿರ್ಮಾಪಕ, ನಟ ಹಾಕಿಕೊಟ್ಟಂತಹ ದಾರಿಯಲ್ಲಿ ಕನ್ನಡ ಚಿತ್ರರಂಗ ಸಾಗಿ ಬಂದಿದ್ದು, ಇಂದಿನ ಕಿರಿ-ಹಿರಿ ನಟರು, ನಿರ್ದೇಶಕರು ಅವರ ಆಶಯದಂತೆ, ಅವರ ದಾರಿಯಲ್ಲಿ ಸಾಗಿದರೆ ಕನ್ನಡ ರಂಗಭೂಮಿ ಮತ್ತು ಚಿತ್ರರಂಗ ಇನಷ್ಟು ಎತ್ತರಕ್ಕೆ ಬೆಳೆಯಲಿದೆ.

ರಾಜಧಾನಿಯಲ್ಲಿ ಕನ್ನಡದ ಕಂಪಿಲ್ಲ, ಕನ್ನಡಿಗನ ದನಿ ಇಲ್ಲ: ಎಚ್ಚೆತ್ತು ಕೊಳ್ಳದಿದ್ದರೇ ಅವನತಿ ತಪ್ಪಿದ್ದಲ್ಲ

kannada
ರಾಜ್ಯ ರಾಜಧಾನಿ ಬೆಂಗಳೂರಿನ ಖ್ಯಾತಿ ದೇಶ-ವಿದೇಶದಲ್ಲಿ ಪ್ರತಿಧ್ವನಿಸುತ್ತಿದ್ದರೆ, ಇತ್ತ ನಗರದಲ್ಲಿ ಕನ್ನಡಿಗನನ್ನು, ಕನ್ನಡವನ್ನು ಹೆಕ್ಕಿ ಹುಡುಕಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನಾಡು ನುಡಿಯ ಸೊಗಡು ದಿನೇ ದಿನೇ ಮಾಯವಾದಂತೆ ಭಾಸವಾಗುತ್ತಿದೆ.
.
ಕನ್ನಡಿಗನೇ ತನ್ನ ನೆಲದಲ್ಲಿ ತನ್ನ ಅಸ್ತಿತ್ವಕ್ಕೆ ಹೋರಾಟ ನಡೆಸುವ ದುಸ್ಥಿತಿ ಎದುರಾಗಿದೆ. ನಮ್ಮದೇ ರಾಜ್ಯದಲ್ಲಿ ನಮ್ಮದೇ ಆಡು ಭಾಷೆಯನ್ನು ಆಡುವವರ ಸಂಖ್ಯೆ ದಿನೇ ದಿನೇ ಕುಸಿಯುತ್ತಿರುವುನ್ನು ನೋಡಿದರೆ ಮುಂದಿನ ಜನಾಂಗಕ್ಕೆ ನಾಡು-ನುಡಿಯ ಕಂಪನ್ನು ಪಸರಿಸುವುದಾದರು ಯಾರು..? ಮತ್ತೆ ಹೇಗೆ..? ಎನ್ನುವ ಪ್ರಶ್ನೆ ಉದ್ಭವವಾಗುತ್ತಿದೆ.
.
ಶಾಸ್ತ್ರೀಯ ಸ್ಥಾನಮಾನ ಪಡೆದಿರುವ ಕನ್ನಡ ಭಾಷೆಗೆ ತನ್ನದೇ ಆದ ಸುಂದರ ಇತಿಹಾಸವಿದೆ.ಸಂಸ್ಕೃತ,
ತಮಿಳಿನ ನಂತರದ ಅತ್ಯಂತ ಪುರಾತನ ಭಾಷೆ ಎಂಬ ಹೆಗ್ಗಳಿಕೆ ಸಹ ಇದೆ. ಅಲ್ಲದೇ ಹಲವು ಭಾಷೆಗಳ ಜನ್ಮಕ್ಕೂ ನಮ್ಮ ಭಾಷೆ ಕಾರಣವಾಗಿದೆ. ಆದರೆ ಇಂತಹ ಪ್ರಾಚೀನ ಭಾಷೆ ತನ್ನ ನೆಲದಲ್ಲೇ ಉಳಿವಿಗಾಗಿ ಪರದಾಡುತ್ತಿದೆ.
.
ದೇಶದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಕರ್ನಾಟಕದ ಹೆಮ್ಮೆಯ ಬೆಂಗಳೂರಿನಲ್ಲಿ ಕನ್ನಡಿಗನೇ ಪರಕೀಯನಾಗಿದ್ದಾನೆ, ಕನ್ನಡವೇ ಪರಕೀಯ ಭಾಷೆ ಎನ್ನುವಂತೆ ಬಿಂಬಿಸಲಾಗುತ್ತಿದೆ. ವಲಸಿಗರ ಸಂಖ್ಯೆ ಹೆಚ್ಚಾದಂತೆ ಬೇರೆ-ಬೇರೆ ಭಾಷೆಗಳ ಪ್ರಭಾವ ಹೆಚ್ಚಾಗಿ, ಕನ್ನಡಿಗನ ಕೂಗು ಯಾರಿಗೂ ಕೇಳದಾಗಿದೆ.
.
ಒಂದು ಕಡೆ ಹತ್ತಿರದಲ್ಲೇ ಇರುವ ತಮಿಳುನಾಡಿನಿಂದ ಬಂದ ತಮಿಳು ಭಾಷಿಕರ ಸಂಖ್ಯೆಯು ಹೆಚ್ಚಾಗಿದ್ದು, ಇದರೊಂದಿಗೆ ಆಂಧ್ರ ಭಾಗದ ತೆಲುಗು ಭಾಷಿಕರು ಸಹ ಅಧಿಕ ಪ್ರಮಾಣದಲ್ಲೇ ಇಲ್ಲಿ ನೆಲೆಯೂರಿದ್ದಾರೆ. ಅಲ್ಲಿಂದ ಬಂದು ಇಲ್ಲಿನ ಭಾಷೆಯನ್ನು ಕಲಿಯುವ ಬದಲು ತಮ್ಮ ಭಾಷೆಯನ್ನೇ ಪ್ರೋತ್ಸಾಹಿಸುವ ಮಟ್ಟಕ್ಕೆ ಬೆಳೆದಿದ್ದಾರೆ.
.
ಇದರ ಬೆನ್ನ ಹಿಂದೆಯೇ ಐಟಿ-ಬಿಟಿ ಮಂದಿ ಸಹ ಹಿಂದಿ-ಇಂಗ್ಲೀಷ್ ಭಾಷೆಯ ಬಳಕೆಯನ್ನು ಹೆಚ್ಚು ಮಾಡಿ ಸ್ಥಳೀಯ ಭಾಷೆಯ ಅವಲಂಬನೆಯನ್ನು ಕಡಿಮೆ ಮಾಡುವ ಕಾರ್ಯಕ್ಕೆ ಕಿಚ್ಚು ಹೆಚ್ಚಿಸಿದ್ದಾರೆ.
.
ಇದನ್ನೇಲ್ಲ ನೋಡಿಕೊಂಡೆ ಸುಮ್ಮನಿರುವ ಪ್ರಜ್ಞಾವಂತ ಕನ್ನಡಿಗರು ನಮ್ಮ ನಾಡು-ನುಡಿಯ ಉಳಿವಿಗೆ ತಮ್ಮದೇ ಆದ ಅಳಿಲಿನ ಸೇವೆ ಮಾಡಲೇಬೇಕಿದೆ. ಭಾಷೆ ಉಳಿವಿಗೆ ಸಂಘಟನೆಯೇ ಬೇಕು, ಹೋರಾಟವೇ ನಡೆಯಬೇಕು ಎಂಬ ನಿಯಮವಿಲ್ಲ, ನಮ್ಮ ದಿನ ನಿತ್ಯದ ಚಟುವಟಿಕೆಗಳೇ ನಮ್ಮ ಸೊಗಡನ್ನು ಉಳಿಸಿ-ಬೆಳೆಸಲಿದೆ.
.
ಕನ್ನಡಿಗರು ಮಾಡಬೇಕಾಗಿದ್ದೇನು…?
 •  ನಮ್ಮ ನಾಡು ನುಡಿಯ ಬಗ್ಗೆ ಹೆಮ್ಮೆ ಬೆಳೆಸಿಕೊಂಡು ಸಾರ್ವಜನಿಕ ಸ್ಥಳದಲ್ಲಿ ಕನ್ನಡ ಮಾತನಾಡಿದರೆ ನಾಲ್ಕು ಜನರ ಮುಂದೆ ಸಣ್ಣವನಾಗುತ್ತೇನೆ ಎನ್ನುವ ಹಿಂಜರಿಕೆಯನ್ನು ಬಿಟ್ಟು ಎದೆಯುಬ್ಬಿಸಿ ಕನ್ನಡ ಮಾತನಾಡುದನ್ನು ಮೈಗೂಡಿಸಿಕೊಳ್ಳಬೇಕಿದೆ.
 •  ಸಾಧ್ಯವಾದಷ್ಟು ಭಾಷೆಯ ಇತಿಹಾಸವನ್ನು, ಸಾಹಿತ್ಯ –ಕಲೆಯ ಬಗ್ಗೆ ತಿಳಿದುಕೊಂಡು, ನಾಲ್ಕು ಜನರಿಗೆ ತಿಳಿಸುವ ಪ್ರಯತ್ನ ಮಾಡಬೇಕಿದೆ.
 •  ಕನ್ನಡ ಪುಸ್ತಕಗಳನ್ನು ಓದುವ, ಕನ್ನಡ ಚಿತ್ರಗಳನ್ನು, ನಾಟಕಗಳನ್ನು ಪ್ರೋತ್ಸಾಹಿಸುವ, ಸ್ಥಳೀಯ ಕಲೆಗಳನ್ನು ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕಿದೆ.
 •  ಸುತ್ತಮುತ್ತಲಿರುವ ಅನ್ಯಭಾಷಿಕರಿಗೆ ಪ್ರೀತಿಯಿಂದಲೇ ಕನ್ನಡವನ್ನು ಕಲಿಸು ಪ್ರಯತ್ನ ನಡೆಯಬೇಕಿದೆ. ಕನ್ನಡ ಗೊತ್ತಿಲ್ಲದವರಿಗೆ ಚಿಕ್ಕ ಚಿಕ್ಕ ಪದಗಳನ್ನು ಹೇಳಿಕೊಡುವುದು, ದಿನ ನಿತ್ಯ ಅವಶ್ಯವಿರುವ ವಾಕ್ಯ ರಚನೆಯನ್ನು ಕಲಿಸುವ ಪ್ರಯತ್ನ ಮಾಡಬೇಕಿದೆ.
 •  ಬೇರೆ ರಾಜ್ಯದಿಂದ ಬಂದು ಇಲ್ಲಿ ನೆಲೆಸಿರುವ ಕಾರ್ಮಿಕ ವರ್ಗಕ್ಕೆ ತರಗತಿಗೆ ಸೇರಿ ಕನ್ನಡ ಕಲಿಯುವಷ್ಟು ಶಕ್ತಿ ಇರುವುದಿಲ್ಲ ಅಂತವರಿಗೆ ಆಡುವ ಮಾತಿನಲ್ಲೇ, ಸಣ್ಣ-ಪುಟ್ಟ ವ್ಯವಹಾರದಲ್ಲೇ ಕನ್ನಡವನ್ನು ಕಲಿಸುವ ಕಾರ್ಯವಾಗಬೇಕಿದೆ.
 •  ಸಾಧ್ಯವಾದಷ್ಟು ಮಾಲ್ ಗಳಲ್ಲಿ, ಕಾಫಿ ಶಾಪ್ ಗಳಲ್ಲಿ ಕನ್ನಡದಲ್ಲೇ ವ್ಯವಹರಿಸುವುದನ್ನು ಮೈಗೂಡಿಸಿಕೊಳ್ಳಬೇಕಿದೆ. ಆ ಮೂಲಕ ಅಲ್ಲಿರುವ ಇಂಗ್ಲೀಷ್ ವ್ಯಾಮೋಹವನ್ನು ಕಡಿಮೆ ಮಾಡಿ, ಕನ್ನಡಾಭಿಮಾನವನ್ನು ಹೆಚ್ಚಿಸಬೇಕಿದೆ.
 • ಇಂತಹ ಸಣ್ಣ-ಪುಟ್ಟ ಕಾರ್ಯಗಳೆ ನುಡಿಯ ಉಳಿವಿಗೆ ಕಾರಣವಾಗಲಿದೆ. ಹನಿ ಹನಿಗೂಡಿದರೆ ಹಳ್ಳ ಎನ್ನುವಂತೆ ನಾಲ್ಕು ಮಂದಿ ಈ ಕಾರ್ಯಾಕ್ಕೆ ನಿಂತರೆ ಅವರೊಂದಿಗೆ ನಲ್ವತ್ತು ಮಂದಿ ಕೈ ಜೋಡಿಸಲಿದ್ದಾರೆ. ಹೀಗೆ ಈ ಸಂಖ್ಯೆ ಹೆಚ್ಚಾಗುತ್ತಲೇ ಸಾಗುತ್ತದೆ.. ಕನ್ನಡಿಗರೇ ಒಂದಾಗಿ
ಜೈ ಭುವನೇಶ್ವರಿ

ವೀರಮರಣವನ್ನಪ್ಪಿದ ಯೋಧನಿಗೆ ಭಾವಪೂರ್ಣ ಶ್ರದ್ದಾಂಜಲಿ.

major-akshay-girish-kumar
ಜಮ್ಮುವಿನ ನಗ್ರೋಟ ಸೇನಾ ನೆಲೆ ಮೇಲೆ ಪಾಕ್ ಉಗ್ರರು ನಡೆಸಿದ ದಾಳಿಯಲ್ಲಿ ಹುತಾತ್ಮರಾಗಿರುವ ಅಕ್ಷಯ್ ಗಿರೀಶ್ ಕುಮಾರ್‍ರವರು ಬೆಂಗಳೂರಿನವರಾಗಿದ್ದು, ಇಂತಹಾ ಅಪ್ರತಿಮ ದೇಶಭಕ್ತನನ್ನು ಕಳೆದುಕೊಂಡದ್ದು ನಿಜಕ್ಕೂ ರಾಜ್ಯ ಮತ್ತು ದೇಶಕ್ಕೆ ತುಂಬಲಾರದ ನಷ್ಟವಾಗಿದೆ.
       ಯಲಹಂಕದ ಸಾದಹಳ್ಳಿಯ ಜೇಡ್ ಗಾರ್ಡನ್ಸ್‍ನಲ್ಲಿ ವಾಸವಿದ್ದ ಅಕ್ಷಯ್‍ರವರು ಚಿಕ್ಕ ವಯಸ್ಸಿನಿಂದಲೇ ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡಬೇಕೆಂಬ ಆಸೆ ಹೊಂದಿದ್ದವರು. ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಜೈನ್ ಕಾಲೇಜಿನಲ್ಲಿ 2003 ನೇ ಇಸವಿಯಲ್ಲಿ ಬಿ.ಎಸ್ಸಿ ವ್ಯಾಸಂಗ ಮಾಡುವಾಗಲೇ ಸೈನ್ಯಕ್ಕೆ ಸೇರುವ ಅವಕಾಶ ಇವರಿಗೆ ದೊರೆಯಿತು, ದೇಶ ಸೇವೆ ಮಾಡುವ ಅವಕಾಶವನ್ನು ಸಂತಸದಿಂದ ಸ್ವೀಕರಿಸಿ ಸೈನ್ಯಕ್ಕೆ ಸೇರಿದರು.
       ಇವರ ತಂದೆ ವಿಮಾನದ ಚಾಲಕರಾಗಿ ಸೇವೆ ಸಲ್ಲಿಸಿದ್ದವರು. ಸಣ್ಣ ವಯಸ್ಸಿನಲ್ಲಿಯೇ ಮೇಜರ್ ಹುದ್ದೆಗೇರಿದ್ದ ಅಕ್ಷಯ್‍ರವರು, ಸೇನೆಯಲ್ಲಿ ಮತ್ತಷ್ಟು ಪ್ರಮುಖ ಜವಾಬ್ದಾರಿ ನಿರ್ವಹಿಸುವ ಕನಸು ಹೊತ್ತು ತಮ್ಮನ್ನು ತಾವು ದೇಶ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
       ದೇವನಹಳ್ಳಿಯಲ್ಲಿರುವ ನಿವಾಸದಲ್ಲಿ ಅಕ್ಷಯ್‍ರವರ ತಂದೆ ಮತ್ತು ತಾಯಿ ವಾಸವಿದ್ದರು, ಅಕ್ಷಯ್‍ರವರ ಪತ್ನಿ ಸಂಗೀತಾ ಹಾಗೂ ಎರಡೂವರೆ ವರ್ಷದ ಮಗಳು ನೈನಾ ಜಮ್ಮುವಿನಲ್ಲಿ ಅಕ್ಷಯ್ ಜತೆ ವಾಸವಿದ್ದರು. ಪುತ್ರನ ಸಾವಿನ ಸುದ್ದಿ ತಿಳಿದ ತಕ್ಷಣ ಇವರ ತಂದೆ ತಾಯಿ ದೆಹಲಿಗೆ ಮಗನ ಪಾರ್ಥೀವ ಶರೀರವನ್ನು ಕಾಣಲು ತೆರಳಿದರು.
       ಅಕ್ಷಯ್‍ರವರ ಪಾರ್ಥೀವ ಶರೀರವನ್ನು ಯಲಹಂಕದ ವಾಯುನೆಲೆಗೆ ಸೇನಾ ವಿಮಾನದಲ್ಲಿ ಇಂದು ಬೆಳಿಗ್ಗೆ ಸುಮಾರು 11.30 ಕ್ಕೆ ತರಲಾಯಿತು. ಇಲ್ಲಿ ಮಿಲಿಟರಿ ಗೌರವವನ್ನು ಸಲ್ಲಿಸಿದ ನಂತರ ಅಕ್ಷಯ್‍ರವರ ಪಾರ್ಥೀವ ಶರೀರವನ್ನು ವರ ನಿವಾಸವಾದ ಜೇಡ್ ಗಾರ್ಡನ್‍ಗೆ ಕೊಂಡೊಯ್ದು ಅಲ್ಲಿ ಸಾವ್ಜನಿಕರ ದರ್ಶನಕ್ಕೆ ಇಡಲಾಯಿತು. ನಂತರ ಅವರ ಪಾರ್ಥೀವ ಶರೀರವನ್ನು ಮೆರವಣಿಗೆಯ ಮೂಲಕ ಸಂಜೆ 4 ಗಂಟೆಗೆ ಹೆಬ್ಬಾಳದ ವಿದ್ಯುತ್ ಚಿತಾಗಾರಕ್ಕೆ ಕೊಂಡೊಯ್ದು ಅಲ್ಲಿ ಶವಸಂಸ್ಕಾರವನ್ನು ನೆರವೇರಿಸಲಾಗುತ್ತದೆ.
     ಈ ರೀತಿಯ ಭಯೋತ್ಪಾದಕ ದಾಳಿಗಳು ಆಗಾಗ ನಡೆಯುತ್ತಾ ಇರುತ್ತವೆ, ಅಂತಹಾ ಸಂದರ್ಭಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿ ನಮ್ಮ ಸೈನ್ಯಕ್ಕೆ ಇದೆಯಾದರೂ, ಕೆಲಮೊಮ್ಮೆ ದುರಾದೃಷ್ಟವಶಾತ್ ಸೈನಿಕರ ಪ್ರಾಣ ಹಾನಿಯಾಗುತ್ತದೆ. ಪ್ರಾಣದ ಹಂಗು ತೊರೆದು ದೇಶದ ಗಡಿಯಲ್ಲಿ ಹಗಲಿರುಳೆನ್ನದೆ ನಮ್ಮನ್ನು ಕಾಯುತ್ತಿರುವ ಸೈನಿಕರ ಋಣವನ್ನು ನಾವೆಂದಿಗೂ ಮರೆಯಬಾರದು. ಕುಟುಂಬವನ್ನು ತೊರೆದು ದೂರದ ಗಡಿಗಳಲ್ಲಿ ಎಲ್ಲಾ ಕಷ್ಟಗಳನ್ನು ತಡೆದುಕೊಂಡು ನಮಗಾಗಿ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟು ಹೋರಾಡುವ ನಮ್ಮ ಪ್ರೀತಿಯ ಸೈನಿಕರಿಗಾಗಿ ನಿತ್ಯ ಪ್ರಾರ್ಥಿಸೋಣ..
       ನಮ್ಮನ್ನೆಲ್ಲ ತೊರೆದ ವೀರಯೋಧ ಮೇಜರ್ ಅಕ್ಷಯ್ ಗಿರೀಶ್‍ರವರ ಆತ್ಮಕ್ಕೆ ಮುಕ್ತಿ ದೊರೆಯಲಿ ಹಾಗೂ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಪರಮಾತ್ಮ ಅವರ ಕುಟುಂಬಕ್ಕೆ ನೀಡಲಿ ಎಂದು ಬೇಡುತ್ತೇವೆ..
                    ಜೈ ಭಾರತಾಂಬೆ…

ಕನ್ನಡ ಕೇವಲ ಭಾಷೆಯಲ್ಲ, ಕನ್ನಡಿಗರ ಉಸಿರು.

kannada-blog

ಕನ್ನಡ ನೆಲದಲ್ಲಿ ಆಗಾಗ ಕನ್ನಡಕ್ಕೆ ಅವಮಾನವಾಗುವಂತಹಾ ಘಟನೆಗಳು ನಡೆಯುತ್ತಾ ಇರುತ್ತವೆ. ಕೆಲವು ದೊಡ್ಡ ಮಟ್ಟದ ಸುದ್ದಿಯಾದರೆ, ಕೆಲವು ಸುದ್ದಿಯಾಗದೆ ಹಾಗೆಯೇ ಮರೆತುಹೋಗುತ್ತವೆ. ಒಟ್ಟಿನಲ್ಲಿ ಸ್ವಾಭಿಮಾನಿ ಕನ್ನಡಿಗರ ಸ್ವಾಭಿಮಾನಕ್ಕೆ ಅವಮಾನವಾಗುವಂತಹಾ ಪ್ರಸಂಗಗಳು ನಡೆಯುತ್ತಲೇ ಇರುತ್ತವೆ. ಇಷ್ಟೆಲ್ಲಾ ಆದರೂ ಸುಸಂಸ್ಕøತ, ವಿಶಾಲ ಹೃದಯದ ಕನ್ನಡಿಗರು ಅವನೆಲ್ಲಾ ನೋಡಿದರೂ ನೋಡದವರಂತೆ ಸುಮ್ಮನೆ ನಮಗ್ಯಾಕೆ ಈ ವಿಚಾರ ಎಂದು ಸುಮ್ಮನಿರುವುದು ಮಾತ್ರ ತುಂಬಾ ನೋವಿನ ಸಂಗತಿ.

       ಸಾಮಾನ್ಯವಾಗಿ ನಾವು ರಾಜ್ಯೋತ್ಸವ ದಿನಗಳಂದು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇವೆ, ಕಾರ್ಯಕ್ರಮದ ಆಯೋಜಕರು ಕೆಲವೊಮ್ಮೆ ರಸಸಂಜೆ ಕಾರ್ಯಕ್ರಮ, ಖ್ಯಾತ ಹಿನ್ನಲೆ ಗಾಯಕರನ್ನು ಕರೆಸಿ ಹಾಡುಗಳನ್ನು ಹಾಡಿಸುವುದನ್ನು ನೋಡಿರುತ್ತೇವೆ. ಹೀಗೆ ಕಾರ್ಯಕ್ರಮ ನಡೆಯುವಾಗ ಮಧ್ಯದಲ್ಲಿ ಯಾರೋ ಒಬ್ಬ ಎದ್ದು ನಿಂತು ರಜನಿಯ ಹಾಡೋ ಅಥವಾ ಚಿರಂಜೀವಿಯ ಹಾಡನ್ನೋ ಹಾಡಿ ಎಂದು ಹೇಳಿದಾಗ ಸುತ್ತಲಿರುವವರು ನಕ್ಕು ಸುಮ್ಮನಾಗುತ್ತೇವೆ. ಆದರೆ ನಿಜವಾಗಿಯೂ ಆ ಸಂದರ್ಭದಲ್ಲಿ ಆತನಿಗೆ ತಾನಿರುವುದು ಕನ್ನಡ ನಾಡಿನಲ್ಲಿ ಎಂದು ಅರ್ಥ ಮಾಡಿಸುವ ಪ್ರಯತ್ನವನ್ನೇ ನಾವು ಮಾಡಲು ಹೋಗುವುದಿಲ್ಲ. ಇದೇ ನಮ್ಮಿಂದ ಆಗುವ ದೊಡ್ಡ ತಪ್ಪು ಎಂದು ಅನ್ನಿಸುತ್ತಿದೆ.

       ಕನಿಷ್ಠಪಕ್ಷ ಕನ್ನಡಕ್ಕೆ ಅವಮಾನವಾಗುವ ಸಂದರ್ಭದಲ್ಲಾದರೂ ಕನ್ನಡಿಗರಾದ ನಾವು ಭಾಷೆಯ ಪರವಾಗಿ ನಿಲ್ಲಬೇಕು ಇಲ್ಲದಿದ್ದಲ್ಲಿ ಅದನ್ನೇ ಕನ್ನಡಿಗರ ದೌರ್ಬಲ್ಯವೆಂದು ತಿಳಿದು ಅದನ್ನೆ ಮುಂದುವರೆಸುತ್ತಾರೆ. ನಾವು ಭಾಷೆಯ ವಿಚಾರದಲ್ಲಿ ಕುರುಡುತನ ತೋರಿಸಿದರೆ ಕನ್ನಡ ಭಾಷೆ ಕೇವಲ ಕರ್ನಾಟಕದ ಹಳ್ಳಿಗಳಿಗೆ ಮಾತ್ರ ಸೀಮಿತವಾಗಿ ಪಟ್ಟಣ ಮತ್ತು ಮಹಾನಗರಗಳಲ್ಲಿ ಕಣ್ಮರೆಯಾಗುತ್ತದೆ. ಕನ್ನಡಕ್ಕೆ ಅವಮಾನ ಮಾಡಿದವನಿಗೆ ಹೊಡೆದು ಬುದ್ಧಿಕಲಿಸುವ ಅಗತ್ಯವಿಲ್ಲ, ಅವನಿಗೆ ಕನ್ನಡ ನಾಡಿನಲ್ಲಿ ನೀನು ಬದುಕುತ್ತಿದ್ದೀಯ, ಈ ನೆಲ ನಿನಗೆ ಅನ್ನವನ್ನು ಕೊಡುತ್ತಿದೆ ಎಂದು ತಿಳಿ ಹೇಳಬೇಕು, ಆಗ ಆತನಿಗೆ ತನ್ನ ತಪ್ಪಿನ ಅರಿವಾಗುತ್ತದೆ.

        ಹೀಗೆ ರಾಜ್ಯೋತ್ಸವದ ಸಂದರ್ಭದಲ್ಲಿ ಬೇರೆ ಭಾಷೆಯ ಹಾಡುಗಳನ್ನು ಹಾಡಿದರೂ ನಾವು ವಿರೋಧಿಸುತ್ತಿಲ್ಲ, ದೊಡ್ಡ ದೊಡ್ಡ ಮಾಲ್‍ಗಳಲ್ಲಿ ಕನ್ನಡ ಹಾಡು ಹಾಕಬೇಕಾದರೆ ನಾವೇ ಪ್ರತಿಭಟಿಸಿ ಅದನ್ನು ಪ್ರಸಾರ ಮಾಡಿಸಿಕೊಳ್ಳಬೇಕಾದ ದುರ್ಗತಿ ಬಂದಿದೆ. ಬೆಂಗಳೂರಿನಲ್ಲಿ ಕನ್ನಡ ಚಲನಚಿತ್ರಗಳಿಗೆ ಚಿತ್ರಮಂದಿರ ಸಿಗುತ್ತಿಲ್ಲ, ವರ್ಷಕ್ಕೆ ಒಂದು ಚಿತ್ರವನ್ನಾದರೂ ಹಾಕಬೇಕೆಂಬ ನಿಯಮವನ್ನು ಕೂಡ ಅವರು ಪಾಲನೆ ಮಾಡುತ್ತಿಲ್ಲ, ಇದೆಲ್ಲ ಇಂದು ನಮ್ಮ ಭಾಷೆಯ ಉಳಿವಿನ ಪ್ರಶ್ನೆಯಾಗಿದೆ.

        ಇತರ ರಾಜ್ಯಗಳಿಗೆ ಹೋಗಿ ಜೀವನ ಸಾಗಿಸಲು ಆಯಾ ರಾಜ್ಯದ ಭಾಷೆಯನ್ನು ಕಲಿಯುತ್ತಿರುವ ಕನ್ನಡಿಗರಂತೆ ಇಲ್ಲಿ ಇರುವ ಬೇರೆ ರಾಜ್ಯದ ಜನ ಕನ್ನಡ ಕಲಿಯಬೇಕೆಂಬ ವಿಚಾರದ ಕಡೆಗೆ ಗಮನ ಹರಿಸದಿರಲು ಕಾರಣಗಳೇನು ಅಂತ ಯೋಚಿಸಿದಾಗ, ತಪ್ಪು ನಮ್ಮ ಕನ್ನಡಿಗರದ್ದೇ ಹೆಚ್ಚು ಕಂಡುಬರುತ್ತದೆ. ನಾವು ಅವರೊಂದಿಗೆ ಇಂಗ್ಲೀಷ್ ಭಾಷೆ ಅಥವಾ ಹಿಂದಿಯಲ್ಲಿ ಸಂವಹನ ನಡೆಸುತ್ತೇವೆ ಹಾಗಾಗಿ ಅವರಿಗೆ ಕನ್ನಡ ಕಲಿಯುವ ಅಗತ್ಯವೇ ಕಾಣುತ್ತಿಲ್ಲ. ಇದನ್ನು ಕನ್ನಡಿಗರ ವಿಶಾಲ ಹೃದಯವೆಂದು ಕರೆಯಬಹುದೋ ಅಥವಾ ನಮ್ಮ ಭಾಷೆಯ ಮೇಲಿನ ಅಭಿಮಾನದ ಕೊರತೆಯೆಂದು ತಿಳಿಯಬೇಕೋ ಗೊತ್ತಾಗುತ್ತಿಲ್ಲ.

       ಸಾಧ್ಯವಾದಷ್ಟು ನಮ್ಮ ಸುತ್ತಮುತ್ತ ಕನ್ನಡದ ನಾಮ ಫಲಕಗಳನ್ನು ಬಳಸುವಂತೆ ಎಲ್ಲರಿಗೂ ತಿಳಿಹೇಳಬೇಕು, ಜೊತೆಗೆ ನಾವು ಕೂಡ ಅದನ್ನು ಅನುಸರಿಸಬೇಕು. 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದು ಮುಂಚೂಣಿಯಲ್ಲಿರುವ ಕನ್ನಡ ಭಾಷೆ ಕೇವಲ ಹೆಸರಿಗಷ್ಟೇ ಭಾಷೆಯಾಗಿ ಉಳಿಯದಂತೆ ಕಾಪಾಡಬೇಕಾದ ಅನಿವಾರ್ಯ ಸ್ಥಿತಿ ಇಂದು ಬಂದಿದೆ. ಬರಿ ಕನ್ನಡ ಬಾವುಟಗಳನ್ನು ಹಾರಿಸುವುದರಿಂದ ಭಾಷೆಯನ್ನು ಬೆಳೆಸಿದಂತಲ್ಲ, ಸಾಧ್ಯವಾದಷ್ಟು ಕನ್ನಡವನ್ನು ನಮ್ಮ ನಿತ್ಯದ ಬದುಕಿನಲ್ಲಿ ಮತ್ತು ಸುತ್ತಮುತ್ತಲಿನವರ ಜೊತೆಗಿನ ವ್ಯವಹಾರದ ಸಂದರ್ಭದಲ್ಲಿ ಬಳಸುತ್ತಾ ಹೋಗಬೇಕು ಆಗ ಮಾತ್ರ ಒಂದು ಭಾಷೆ ಬೆಳೆಯಲು ಸಾಧ್ಯ.

        ಈ ಸಂದಭದಲ್ಲಿ ಭಾಷೆಯ ಬಗ್ಗೆ ವಿವರಿಸಲು ಕೂಡ ಒಂದು ಕಾರಣವಿದೆ. ಈಗ ಡಿಸೆಂಬರ್ ತಿಂಗಳು ಸಮೀಪಿಸುತ್ತಿದೆ, ನವೆಂಬರ್ ತಿಂಗಳಿನಲ್ಲಿ ಮಾತ್ರ ಕನ್ನಡ, ಕನ್ನಡ ಎಂದು ಕೂಗುವವರು ಡಿಸೆಂಬರ್ ಬಂದರೆ ಕಣ್ಮರೆಯಾಗುತ್ತಾರೆ. ಹಾಗಾಗಿ ಇನ್ನು ಮುಂದಾದರೂ ನಾವೆಲ್ಲರು ಕೇವಲ ನವೆಂಬರ್ ಕನ್ನಡಿಗರಾದೆ ವರ್ಷಪೂರ್ತಿ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ಪ್ರಯತ್ನವನ್ನು ಮಾಡೋಣ. ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಕನ್ನಡ ನಾಡು, ನುಡಿಗಾಗಿ ಹೋರಾಡುವ ಮನಃಸ್ಥಿತಿಯನ್ನು ಕರುಣಿಸಲಿ ಎಂದು ಈ ಮೂಲಕ ಪ್ರಾರ್ಥಿಸುತ್ತೇವೆ.

                  ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ.

ಸಾಹಿತ್ಯದ ಬದುಕಿನಲ್ಲಿ ಮಲೆನಾಡ ಸೊಗಡು ಬೀರಿದ ಸಾಹಿತಿ: ನಾ. ಡಿಸೋಜ

na-dsouza

ಕನ್ನಡಭಾಷೆ, ಸಾಹಿತ್ಯ ಉಳಿಯಬೇಕು, ಸರ್ಕಾರ ಕನ್ನಡ ಮಾಧ್ಯಮವನ್ನು ಕಡ್ಡಾಯಗೊಳಿಸಬೇಕು ಎಂದು ಹೇಳುತ್ತಾ ನಿತ್ಯ ತಮ್ಮಜೀವನದಲ್ಲಿ ಬೇರೆ ಭಾಷೆಯನ್ನೆ ಹೆಚ್ಚೆಚ್ಚು ಬಳುಸುತ್ತಾ ಇತರ ಭಾಷೆಗೆ ಬದುಕಿನಲ್ಲಿ ಮಹತ್ವವನ್ನು ನೀಡುವ ಹಲವಾರು ಸಾಹಿತಿಗಳಿಂದುನಮ್ಮ ನಡುವಿದ್ದಾರೆ. ಇಂತವರ ಮಧ್ಯದಲ್ಲಿ ತಾನು ಬೆಳೆದ ಪರಿಸರದ ವಿಶೇಷತೆಗಳಿಗೆ ಹೆಚ್ಚಿನ ಬೆಲೆ ಕೊಟ್ಟು ಮಲೆನಾಡಿನ ವಿಶಿಷ್ಟತೆಗಳನ್ನುತಮ್ಮ ಸಾಹಿತ್ಯದ ಮುಖ್ಯವಸ್ತುವನ್ನಾಗಿ ಬಳಸಿಕೊಂಡು, ಮಲೆನಾಡಿದ ಕಂಪನ್ನು ಎಲ್ಲರೂ ಆನಂದ ನೀಡುವಂತೆ ಬರೆಯುವ ಸಾಹಿತಿಗಳಲ್ಲಿನಾ.ಡಿಸೋಜ ಪ್ರಮುಖರು.

75 ವರ್ಷದ ನಾ.ಡಿಸೋಜರವರು ಕಳೆದ ಕೆಲ ಕಾಲಮಾನಗಳಿಂದ ಯಾವುದೇ ಪ್ರಚಾರವನ್ನು ಬಯಸದೆ, ವಾಸ್ತವದ ಹಲವಾರುಸಂಗತಿಗಳನ್ನು ತಮ್ಮ ಕೃತಿಗಳಲ್ಲಿ ಬರೆಯುತ್ತಾ ಓದುಗರಿಗೆ ಸುಂದರ ಅನುಬವವನ್ನು ನೀಡುತ್ತಾ ಬಂದಿದ್ದಾರೆ. ಅದರಲ್ಲಿಯೂ ಮುಖ್ಯವಾಗಿತಾವು ಬದುಕಿ ಬಾಳಿದ ಮಲೆನಾಡಿನ ಪರಿಸರ, ಅಲ್ಲಿನ ಜನರ ಮನದ ತಲ್ಲಣಗಳ ಬಗ್ಗೆ, ಪರಿಸರ ನಾಶ, ಹಿಂದೆ ಮಲೆನಾಡನ್ನು ಕಾಡಿದ್ದಪ್ಲೇಗ್ ನಂತಹಾ ರೋಗಗಳ ಬಗ್ಗೆ ಹಾಗೂ ಲಿಂಗನಮಕ್ಕಿ ಅಣೆಕಟ್ಟು ಮಲೆನಾಡಿನ ಜನರ ಜೀವನವನ್ನು ಮುಳುಗಿಸಿದ ಬಗ್ಗೆ ಇವರ ಸಾಹಿತ್ಯಕೃತಿಗಳಲ್ಲಿದೆ. ಮಲೆನಾಡಿನ ಅಪರೂಪದ ಚಿತ್ರಗಳು, ಕೆಲವು ವಿಶೇಷ ವ್ಯಕ್ತಿಗಳು ಹಾಗೂ ಸಮಾಜದ ಕೆಲವು ಸಾಧಕರ ಬಗ್ಗೆಯೂ ಇವರಕೃತಿಗಳಲ್ಲಿ ಮಾಹಿತಿ ದೊರೆಯುತ್ತದೆ.

ಕಾದಂಬರಿ, ಸಣ್ಣ ಕಥೆ, ಮಕ್ಕಳ ಸಾಹಿತ್ಯ, ನಾಟಕ, ಜೀವನ ಚರಿತ್ರೆ ಹೀಗೆ ಸಆಹಿತ್ಯದ ವಿವಿಧ ಮುಖಗಳನ್ನು ತಮ್ಮ ಬರವಣಿಗೆಯಲ್ಲಿಓದುಗರಿಗೆ ಧಾರೆ ಎರೆಯುತ್ತಾ ಬಂದಿದ್ದಾರೆ. 1937 ರ ಜೂನ್ 6 ರಂದು ಶಿವಮೊಗ್ಗದ ಸಾಗರದಲ್ಲಿ ಜನಿಸಿದ ಇವರು ಸಹ್ಯಾದ್ರಿ ಕಾಲೇಜಿನಲ್ಲಿಇಂಟರ್ ಮೀಡಿಯೆಟ್ ಶಿಕ್ಷಣವನ್ನು ಮುಗಿಸಿದು. ಇವರು ಬಾಲ್ಯದಿಂದಲೇ ಸಾಹಿತ್ಯದ ಕಡೆಗೆ ಆಸಕ್ತಿಯನ್ನು ಹೊಂದಿದ್ದರು ಕಾರಣ ಇವರಮನೆಯ ವಾತವರಣವೂ ಸಾಹಿತ್ಯಕ್ಕೆ ಪೂರಕವಾಗಿತ್ತು. ಇವರ ತಂದೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು, ತಾಯಿ ಮಕ್ಕಳಿಗೆಬಾಲ್ಯದಿಂದಲೂ ಜಾನಪದ ಕಥೆಗಳನ್ನು ಹೇಳುತ್ತಿದ್ದರು ಹಾಗಾಗಿ ಇವರಿಗೆ ಜೀವನದ ಪ್ರಾರಂಭದ ದಿನದಿಂದಲೇ ಸಾಹಿತ್ಯ ಬದುಕಿನ ಒಂದುಭಾಗವಾಯಿತು.

ಇವರು ವಿದ್ಯಾರ್ಥಿಯಾಗಿದ್ದಾಗ ಗೋರೂರು ರಾಮಸ್ವಾಮಿ ಅಯ್ಯಂಗಾರ್‍ರವರ ಜೊತೆಗಿನ ಒಡನಾಟ ಕೂಡ ಇವರಿಗೆ ಸಾಹಿತ್ಯದ ಕಡೆಗಿದ್ದಒಲವು ಇನ್ನಷ್ಟು ಹೆಚ್ಚಾಗಲು ಕಾರಣವಾಯಿತು. ಕಾಲೇಜು ಶಿಕ್ಷಣದ ಸಮಯದಲ್ಲೇ ಶೀಘ್ರಲಿಪಿ ಹಾಗೂ ಬೆರಳಚ್ಚು ಪರೀಕ್ಷೆಗಳನ್ನೂಉತ್ತೀರ್ಣ ಮಾಡಿಕೊಂಡಿದ್ದ ಇವರು ಮುಂದೆ ಲೋಕೋಪಯೋಗಿ ಇಲಾಖೆಯಲ್ಲಿ ಬೆರಳಚ್ಚುಗಾರರಾಗಿ ಕೆಲಸಕ್ಕೆ ಸೇರಿದರು. ಈಸಮಯದಲ್ಲಿ ಮಲೆನಾಡಿದ ವಿವಿಧ ಭಾಗಗಳಲ್ಲಿ ಕೆಲಸ ಮಾಡುವ ಅವಕಾಶ ಪಡೆದ ಇವರು ಅಲ್ಲಿನ ಜನರ ಜೀವನ, ಅವರ ಭಾವನೆಗಳು, ಸಮಸ್ಯೆಗಳು ಮತ್ತು ಅವರ ಬದುಕಿನ ಸವಾಲುಗಳೆಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಇದ್ದರು. ಇವೆಲ್ಲದರ ಹಿನ್ನಲೆಯಲ್ಲಿ ಅವರಿಂದಉತ್ತಮ ಗುಣಮಟ್ಟದ ಸಾಹಿತ್ಯ ಹೊರಬರಲು ಸಾಧ್ಯವಾಯಿತು.

ಇವರ ಮೊದಲ ಕಾದಂಬರಿ ‘ಬಂಜೆ ಬೆಂಕಿ’ ಎಂಬುದು 11964 ರಲ್ಲಿ ಪ್ರಕಟವಾಯಿತು. ನಂತರ ಮುಳುಗಡೆ ದ್ವೀಪ, ತಿರುಗೋಡಿನ ರೈತಮಕ್ಕಳು, ಒಂದು ಜಲಪಾತದ ಸುತ್ತ, ಕೆಂಪು ತ್ರಿಕೋನ ಹೀಗೆ ಹಲವಾರು ಕಾದಂಬರಿಗಳು ಬಂದವು. ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಗಮನಾರ್ಹಕೊಡುಗೆಯನ್ನು ಸಲ್ಲಿಸಿರುವ ಇವರು ಮಕ್ಕಳಗಾಗಿ ಚಿಕ್ಕ ಕಾದಂಬರಿ, ನಾಟಕ, ಸಣ್ಣ ಕಥೆ ಮತ್ತು ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ದೇವರಿಗೆ ದಿಕ್ಕು, ಬಾಲ ಗಂಧರ್ವ, ಕದಂಬ ಮಯೂರಶರ್ಮ ಇನ್ನು ಮುಂತಾದ ಮಕ್ಕಳ ನಾಟಕಗಳನ್ನು ಬರೆದಿದ್ದಾರೆ.

ತಮ್ಮ ಮಾತೃಭಾಷೆ ಕೊಂಕಣಿಯಾಗಿದ್ದರೂ ಕನ್ನಡ ಭಾಷೆಗೆ ಮಾಡಿದ ಈ ರೀತಿಯ ಮೇರು ಸೇವೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕಾಡಿನ ಬೆಂಕಿ ಚಲನಚಿತ್ರಕ್ಕೆ ರಜತ ಕಮಲ ಪ್ರಶಸ್ತಿ, ದ್ವೀಪ ಕಾದಂಬರಿಗೆ ಸ್ವರ್ಣ ಕಮಲ ಪ್ರಶಸ್ತಿ ಕೂಡ ದೊರೆತಿದೆ. 2007 ರಲ್ಲಿ ಕುವೆಂಪುವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ಕೊಟ್ಟು ಗೌರವಿಸಿತು. ಇವರ ಇಷ್ಟೆಲ್ಲಾ ಸಾಹಿತ್ಯ ಕ್ಷೇತ್ರದ ಸಾಧನೆಗಳನ್ನು ಗಮನಿಸಿದಕರ್ನಾಟಕ ಸಾಹಿತ್ಯ ಜಗತ್ತು ಮಡಿಕೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆಮಾಡಿ ಅವರಿಗೆ ಹೆಚ್ಚಿನಗೌರವವನ್ನು ಸಲ್ಲಿಸಿತು. ಇವರಿಂದ ಸಾಹಿತ್ಯ ಕ್ಷೇತ್ರಕ್ಕೆ ಇನ್ನಷ್ಟು ಕೊಡುಗೆಗಳು ಸಿಗುವಂತಾಗಲಿ ಎಂದು ಈ ಮೂಲಕ ಹಾರೈಸೋಣ.

ಮರಗಳಿಗೆ ಮಮತೆಯೆರೆದ ಮಹಾತಾಯಿ ಸಾಲುಮರದ ತಿಮ್ಮಕ್ಕ

Timmakka.png

ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಹುಲಿಕಲ್ ಗ್ರಾಮದಲ್ಲಿ ಜನಿಸಿದವರು. ತಮಗೆ ಮಕ್ಕಳಿಲ್ಲದ ಕಾರಣಕ್ಕೆ ರಸ್ತೆಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಸಾಕಿ ಬೆಳೆಸಿದ ಮಹಾತಾಯಿ ಈಕೆ. ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ಮಹತ್ತರ ಸಾಧನೆಯನ್ನು ಮಾಡಿರುವುದನ್ನು ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳು ಗುರುತಿಸಿ ಇವರನ್ನು ಪುರಸ್ಕರಿಸಿವೆ. ಅವರ ಈ ಸಾಧನೆಗಾಗಿ ಭಾರತದ ರಾಷ್ಟ್ರೀಯ ಪೌರ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು. ಅಮೇರಿಕ ಸಂಯುಕ್ತ ಸಂಸ್ಥಾನದ ಲಾಸ್ ಏಂಜಲೀಸ್, ಓಕ್‍ಲ್ಯಾಂಡ್, ಕ್ಯಾಲಿಫೋರ್ನಿಯಾಗಳಲ್ಲಿ ಸ್ಥಾಪಿತವಾಗಿರುವ ಪರಿಸರ ಶಿಕ್ಷಣಕ್ಕಾಗಿ ತಿಮ್ಮಕ್ಕನವರ ಸಂಪನ್ಮೂಲಗಳು ಎಂಬ ಪರಿಸರವಾದಿ ಸಂಘಟನೆಯ ಹೆಸರನ್ನು ತಿಮ್ಮಕ್ಕನವರನ್ನು ಆಧರಿಸಿ ಇಡಲಾಗಿದೆ.

ಬಡ ಕುಟುಂಬದಲ್ಲಿ ಜನಸಿದ ಇವರು ಯಾವುದೇ ಔಪಚಾರಿಕ ಶಿಕ್ಷಣವನ್ನು ಪಡೆಯಲಿಲ್ಲ, ಅಲ್ಲೆ ಹತ್ತಿರದ ಒಂದು ಕಲ್ಲು ಗಣಿಯಲ್ಲಿ ದಿನಗೂಲಿ ನೌಕರರಾಗಿ ಕೆಲಸ ಮಾಡಿದರು. ಇವರು ಚಿಕ್ಕಯ್ಯ ಎಂಬುವವರನ್ನು ಮದುವೆಯಾದರು. ದುರಾದೃಷ್ಟವಶಾತ್ ಇವರಿಗೆ ಮಕ್ಕಳಾಗಲಿಲ್ಲ. ಈ ದುಃಖವನ್ನು ಮರೆಯಲು ಆಲದ ಮರಗಳನ್ನು ನೆಟ್ಟು ಬೆಳೆಸಿ ಅದರ ಮೂಲಕ ಮಕ್ಕಳ ಪ್ರೀತಿಯನ್ನು ಕಾಣಲು ಪ್ರಾರಂಭಿಸಿದರು.

ತಿಮ್ಮಕ್ಕನವರ ಹಳ್ಳಿಯ ಬಳಿ ಆಲದ ಮರಗಳು ಹೇರಳವಾಗಿದ್ದವು. ತಿಮ್ಮಕ್ಕ ಮತ್ತು ಅವರ ಪತಿ ಆ ಮರಗಳಿಂದ ಸಸಿ ಮಾಡಲು ಪ್ರಾರಂಭಿಸಿದರು. ಮೊದಲ ವರ್ಷ ಹತ್ತು ಸಸಿಗಳನ್ನು ನೆರೆಯ ಕೂದೂರು ಹಳ್ಳಿಯ ಬಳಿ 4 ಕಿ,ಮೀ ಉದ್ದಳತೆಯ ದುರ ನೆಟ್ಟರು.ಹೀಗೆ ವರ್ಷ ಹೋದಂತೆ ಸಸಿಗಳ ಸಂಖ್ಯೆಯನ್ನು ಹೆಚ್ಚಿಸುತ್ತಾ ಹೋದರು. ತಮ್ಮ ಅಲ್ಪ ಆದಾಯವನ್ನು ಈ ಕಾರ್ಯಕ್ಕೆ ಬಳಸಿಕೊಂಡರು. ಸಸಿಗಳಿಗೆ ನೀರಿನ ಅಗತ್ಯವಿರುವುದರಿಂದ ಮಳೆಗಾಲದಲ್ಲಿ ನೆಡುತ್ತಿದ್ದರು.

ತಿಮ್ಮಕ್ಕನವರು ತಮ್ಮ ಬದುಕಿನಲ್ಲಿ ಸರಿಸುಮಾರು ಹತ್ತು ಸಾವಿರಕ್ಕೂ ಹೆಚ್ಚಿನ ಗಿಡಗಳನ್ನು ನೆಟ್ಟು ಆರೈಕೆ ಮಾಡಿ ಬೆಳೆಸಿದ್ದಾರೆ. ಇಂತಹಾ ಮಹಾನ್ ವ್ಯಕ್ತಿಯನ್ನು ಹೊಂದಿರುವ ನಮ್ಮ ನಾಡು ಧನ್ಯ.

ಇವರ ಈ ಸಾಧನೆಗೆ ದೊರೆತ ಪ್ರಶಸ್ತಿಗಳೆಂದರೆ:-

 • ರಾಷ್ಟ್ರೀಯ ಪೌರ ಪ್ರಶಸ್ತಿ
 • ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ
 • ವೀರಚಕ್ರ ಪ್ರಶಸ್ತಿ
 • ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ
 • ಗಾಡ್‍ಫ್ರಿ ಫಿಲಿಫ್ಸ್ ಧೀರತೆ ಪ್ರಶಸ್ತಿ
 • ಪಂಪಾಪತಿ ಪರಿಸರ ಪ್ರಶಸ್ತಿ
 • ಬಾಬಾ ಸಾಹೇಬ್ ಅಂಬೇಡ್ಕರ್ ಪ್ರಶಸ್ತಿ
 • ವನಮಾತೆ ಪ್ರಶಸ್ತಿ
 • ಮಾಗಡಿ ವ್ಯಕ್ತಿ ಪ್ರಶಸ್ತಿ
 • ಶ್ರೀಮಾತಾ ಪ್ರಶಸ್ತಿ
 • ಎಚ್.ಹೊನ್ನಯ್ಯ ಸಮಾಜಸೇವಾ ಪ್ರಶಸ್ತಿ
 • ಕರ್ನಾಟಕ ಪರಿಸರ ಪ್ರಶಸ್ತಿ
 • ಮಹಿಳಾರತ್ನ ಪ್ರಶಸ್ತಿ
 • ನ್ಯಾಷನಲ್ ಸಿಟಿಜನ್ ಪ್ರಶಸ್ತಿ
 • ರಾಜ್ಯೋತ್ಸವ ಪ್ರಶಸ್ತಿ
 • ಹೂವಿನಹೊಳೆ ಪ್ರತಿಷ್ಠಾನದ ವಿಶ್ವಾತ್ಮ ಪ್ರಶಸ್ತಿ
 • ಆರ್ಟ್ ಆಫ್ ಲೀವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ
 • 2010ರ ಸಾಲಿನ ಪ್ರತಿಷ್ಠಿತ ನಾಡೋಜ ಪ್ರಶಸ್ತಿ ಲಭಿಸಿವೆ

ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ತಿಮ್ಮಕ್ಕನವರು 2016 ನೇ ಸಾಲಿನ ವಿಶ್ವದ ನೂರು ಪ್ರಭಾವಿ ಮಹಿಳೆಯರ ಸಾಲಿನಲ್ಲಿ ಕೂಡ ಸ್ಥಾನಪಡೆದು ನಮ್ಮ ದೇಶಕ್ಕೆ ಮತ್ತು ರಾಜ್ಯಕ್ಕೆ ಕೀರ್ತಿಯನ್ನು ತಂದಿದ್ದಾರೆ. ಈ ಮೂಲಕ ನಮಗೆ ತಿಳಿಯುವುದೆಂದರೆ ವಿದ್ಯಾವಂತರೆಲ್ಲರೂ ಜ್ಞಾನಿಗಳಲ್ಲವೆಂದು, ಒಬ್ಬ ಅನಕ್ಷರಸ್ಥೆಯಾಗಿ ಇವರು ಮಾಡಿದ ಕಾರ್ಯಗಳ ಅರ್ಧದಷ್ಟು ಪ್ರಕೃತಿಯನ್ನು ಕಾಪಾಡುವ ಕಾರ್ಯವನ್ನು ವಿದ್ಯಾವಂತರು ಮಾಡಿದ್ದರೆ ಇಂದು ನಮಗೆ ಈ ವಾಯುಮಾಲಿನ್ಯ, ಬರ ಹಾಗೂ ಜಲ ಮಾಲಿನ್ಯದಂತಹಾ ದೊಡ್ಡ ಸಮಸ್ಯೆಗಳು ಎದುರಾಗುತ್ತಿರಲಿಲ್ಲ. ಇನ್ನು ಮುಂದಾದರೂ ಇವರನ್ನು ನೋಡಿ ನಾಗರೀಕ ಸಮಾಜ ಪ್ರಕೃತಿಯ ಅಗತ್ಯತೆಯನ್ನು ಅರಿತು ಪರಿಸರ ಸಂರಕ್ಷಣೆಯ ಕಡೆಗೆ ಗಮನ ಹರಿಸಬೇಕಾಗಿದೆ.

ನಮ್ಮ ಸಾಲುಮರದ ತಿಮ್ಮಕ್ಕ ಇಂದಿನ ಯುವಜನತೆಗೆ ಮಾದರಿಯಾಗಲಿ, ಅವರ ಪರಿಸರ ಸಮರಕ್ಷಣೆಯ ಬಗೆಗಿನ ಹೋರಾಟ ಹೀಗೆ ಸದಾ ಮುಂದುವರೆಯಲಿ ಮತ್ತು ಇನ್ನಷ್ಟು ಗಿಡಗಳನ್ನು ನೆಡುವ ಶಕ್ತಿ ದೇವರು ಅವರಿಗೆ ಕರುಣಿಸಲಿ ಎಂದು ಈ ಮೂಲಕ ಆಶಿಸುತ್ತೇವೆ.

Blog at WordPress.com.

Up ↑